Thursday, 7 March 2019

ಸಂತ ಶಿಶುನಾಳ ಶರೀಫ

ಮಾರ್ಚ್ 7 ಭಾವೈಕ್ಯಕೆಯ ಹರಿಕಾರ ಸಂತ ಶಿಶುನಾಳ ಶರೀಫರ ಜನ್ಮದಿನ.
ಶಿಶುನಾಳ ಶರೀಫರು ಕರ್ನಾಟಕದ ಕಬೀರ್ ದಾಸ್ ಎಂದೇ ಪ್ರಸಿದ್ಧರಾಗಿದ್ದು ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ (ಶಿಶುನಾಳ) ಶಿಶುವಿನಹಾಳ ಎಂಬ ಚಿಕ್ಕ ಗ್ರಾಮ.
ಅಲ್ಲಿಯೇ ಕನ್ನಡ ಮತ್ತು ಉರ್ದು ಶಿಕ್ಷಣ ಪಡೆದು
ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವಾಗ ನಾನೇನು ಮಾಡುತ್ತಿದ್ದೇನೆ? ಬೇರೆಯವರಿಗೆ ಕಲಿಸುವ ಅರ್ಹತೆ ನನಗಿದೆಯೇ? ಎಂಬ ಪ್ರಶ್ನೆಗಳು ಅವರಿಗೆ ಕಾಡತೊಡಗಿದಾಗ ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟು ತಮಗೆ ಸೂಕ್ತವಾದ ಗುರುವಿನ ಹುಡುಕಾಟಕ್ಕೆ ಅಲೆದಾಡುತ್ತಿರುವಾಗ ಕೊನೆಗೆ ಗುರು ಗೋವಿಂದ ಭಟ್ಟರನ್ನು ಭೇಟಿಯಾಗಿ ಅವರನ್ನು ತಮ್ಮ ಗುರುವೆಂದು ಸ್ವೀಕರಿಸುತ್ತಾರೆ. ದೇವಿಯ ಆರಾಧಕರಾಗಿದ್ದ ಗೋವಿಂದ ಭಟ್ಟರು ಬ್ರಾಹ್ಮಣರಾಗಿದ್ದರೂ ಸಂಪ್ರದಾಯ, ಮೂಢನಂಬಿಕೆಗಳ ಎಲ್ಲೆಯನ್ನು ಮೀರಿ ನಿಂತಿದ್ದರು. ಗುರುವಿನ ಒಡನಾಟದಿಂದ ತಮ್ಮ ಅರಿವಿನ ಬಾಗಿಲು ತೆರೆದಾಗ ಶರೀಫರು ಗುರುವಿನೊಡನೆ ಚರ್ಚೆ, ಮಾತು, ಕಲಿಕೆಯಲ್ಲೇ ಹೆಚ್ಚಿನ ಸಮಯ ಕಳೆಯಲಾರಂಭಿಸಿ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿಬಿಟ್ಟರು. ಆಗ ಊರಿನ ಜನ ಶರೀಫರ ಕುಟುಂಬದವರಿಗೆ "ಆ ಜನಿವಾರದವನ ಜೊತೆ ಶರೀಫನಿಗೇನು ಕೆಲಸ?" ಎಂಬೆಲ್ಲ ಪ್ರಶ್ನೆಗಳನ್ನು ಕೇಳತೊಡಗಿದಾಗ ಹೀಗೆ ಬಿಟ್ಟರೆ ಶರೀಫ ಕೈ ತಪ್ಪಿ ಹೋಗುತ್ತಾನೆಂಬ ಭಯದಿಂದ ಶರೀಫರ ಮನವೊಲಿಸಿ ಫಾತಿಮಾ ಎಂಬ ಹೆಣ್ಣುಮಗಳ ಜೊತೆ ಶರೀಫರ ಮದುವೆ ಮಾಡಿದರು.
ಶರೀಫರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಹೆಂಡತಿಯನ್ನು ತುಂಬಾ ಪ್ರೀತಿಸತೊಡಗಿದರು. ಹೆಂಡತಿಯ ಒಡನಾಟದಲ್ಲಿ ಶರೀಫರು ಬೆಟ್ಟದಷ್ಟು ಜ್ಞಾನ, ಪ್ರೀತಿಯನ್ನು ಪಡೆದರು. ಮೊದಲ ಹೆರಿಗೆಯಲ್ಲಿ ಶರೀಫರ ಮಡದಿ, ಮಗು ಇಹಲೋಕ ತ್ಯಜಿಸಿದಾಗ ಶರೀಫರಿಗೆ ಜೀವನದ ಮೇಲೆ ತುಂಬಾ ಬೇಸರವಾದರೂ, ದುಃಖಿಸುತ್ತ ಕೂರದೆ


ದೇವರಲ್ಲಿ ನಂಬಿಕೆಯಿಟ್ಟು ಗುರು ಗೋವಿಂದರೊಡಗೂಡಿ ಮಂದಿರ-ಮಸೀದಿ ಅಲೆಯುತ್ತ ಜ್ಞಾನದ ಸಾಗರವನ್ನೇ ಹರಿಸಿ ಈ ಇಬ್ಬರು ದೈವೀ ಪುರುಷರು ಅನೇಕ ಪವಾಡಗಳನ್ನು ಮಾಡಿದ್ದಾರೆ.
ಶರೀಫರು ತಮ್ಮ ಜೀವನವನ್ನೇ ಪಾರಮಾರ್ಥದ ಸಾಧನೆಗೆ ಮೀಸಲಿಟ್ಟು ಅನೇಕ ತತ್ವಪದಗಳನ್ನು ರಚಿಸಿದ್ದಾರೆ.
ಅವರ ಪದಗಳು ಆಡು ಭಾಷೆಯಲ್ಲಿದ್ದು ಜನಸಾಮಾನ್ಯರ ಮನಕ್ಕೆ ಮುಟ್ಟುವಂತಹವಾಗಿವೆ. ತುಂಬಾ ಗಹನವಾದ ಅಧ್ಯಾತ್ಮ ವಿಚಾರಧಾರೆಗಳನ್ನು ಅವರ ಪದಗಳಲ್ಲಿ ಕಾಣಬಹುದು. ಗುರು ಗೋವಿಂದ ಭಟ್ಟರಷ್ಟೇ ಅಲ್ಲದೇ
ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ, ಅಡವಿ ಸ್ವಾಮಿ, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳೂ ಶರೀಫರ ಮೇಲೆ ಪ್ರಭಾವ ಬೀರಿದ ಮಹಾನ್ ಪುರುಷರು. ಉರ್ದು ಮಿಶ್ರಿತ ಕನ್ನಡದ ಆಡು ಭಾಷೆಯಲ್ಲಿನ ಶರೀಫರ ತತ್ವಪದಗಳು ಒಗಟಿನ ರೂಪದಲ್ಲಿದ್ದು ಅದರಲ್ಲಿನ ಸಾರವನ್ನು ಅರಿಯುವುದೇ ಒಂದು ಕಲಿಕೆಯಾಗಿದೆ. ಶರೀಫರು ಸುಮಾರು 400 ಪದಗಳನ್ನು ರಚಿಸಿದ್ದು ಅವುಗಳಲ್ಲಿ ಸಾಕಷ್ಟು ಪದಗಳು ಹಾಡುಗಳ ರೂಪದಲ್ಲಿ ಪ್ರಸಿದ್ದಿ ಹೊಂದಿವೆ. ಹೆಸರಾಂತ ಗಾಯಕ ಸಿ.ಅಶ್ವಥ್ ಮತ್ತು ಮೊದಲಾದವರ ಧ್ವನಿಯಲ್ಲಿ ಶರೀಫರ ಹಾಡುಗಳು ಕನ್ನಡ ಸಂಗೀತ ಲೋಕದಲ್ಲಿ ಜನಪದ ಅಲೆಯನ್ನೇ ಮೂಡಿಸಿವೆ.
ಶರೀಫರ ಕಾಲಾನಂತರ ಅವರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ,ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ನಂತರ ದೊಡ್ಡ ಗದ್ದುಗೆಯನ್ನೇ ನಿರ್ಮಿಸಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ನಾಂದಿ ಹಾಡಿದರು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಆ ಕಟ್ಟೆಯ ಮೇಲೆ ಗುರು ಗೋವಿಂದ- ಶರೀಫರ ಮೂರ್ತಿಗಳು ಮತ್ತು ನೆರಳು ನೀಡುವ ಬೃಹತ್ ಮರ. ಈ ಮರವು ತುಂಬಾ ವಿಶಿಷ್ಟವಾಗಿದ್ದ ಬೇವಿನ ಮರವಾಗಿದ್ದು ಇದರಲ್ಲಿ ಮಲ್ಲಿಗೆಯ ಬಳ್ಳಿಯೂ ಹಬ್ಬಿಕೊಂಡಿದೆ. ಗದ್ದುಗೆಗೆ ಹಿಂದೂ-ಮುಸಲ್ಮಾನ ಎರಡೂ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.ಈ ಗದ್ದುಗೆ ಎಲ್ಲ ಜಾತಿ, ಮತ, ಧರ್ಮಗಳ ಎಲ್ಲೇ ಮೀರಿ ತುಂಬಾ ಭಕ್ತಿ ಭಾವಗಳಿಂದ ಪೂಜಿಸಲ್ಪಡುತ್ತಿದೆ. ಇಂದಿಗೂ ಕೂಡ ಶರೀಫರ ದೇವಕಾರ ಮನೆತನದವರು ಇಲ್ಲಿ ಪೂಜೆ ಮಾಡುತ್ತಾರೆ. 

2 comments: