Tuesday 16 December 2014

ಎಂದೂ ಮರೆಯದ ಹಾಡು.....

  ಅದೊಂದು ಮಧ್ಯಾಹ್ನ ಕಣ್ಣಿಗೆ ಬಿದ್ದ ಮುದ್ದಾದ ಹಸು ಮತ್ತು ಕರುವನ್ನು ನೋಡಿದಾಗಿಂದ ಮನಸ್ಸು ಇಂದೆಕೋ ಬಾಲ್ಯದ ದಿನಗಳಿಗೆ ನೆಗೆಯುತ್ತಿದೆ. ಅಂಗನವಾಡಿಯಲ್ಲೋ ಒಂದನೆಯ ತರಗತಿಯ ಪಠ್ಯದಲ್ಲಿ ಇರಬೇಕು  "ಪುಣ್ಯಕೋಟಿ ಗೋವಿನ ಹಾಡು". ಆದರೆ ನಾನು ಮಾತ್ರ ಈ ಹಾಡನ್ನು ಶಾಲೆಗೆ ಸೇರುವ ಮುನ್ನವೇ ಅಪ್ಪನಿಂದ  ಕೇಳಲ್ಪಟ್ಟಿದ್ದೆ. ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು, ಯಾರು ಮರೆತರು ನಾ ಮಾತ್ರ ಮರೆಯದ ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಮಕ್ಕಳು ಓದಲೇಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಭಾವನಾತ್ಮಕ ಪದ್ಯ.
  ಅಪ್ಪ ನಾ ಚಿಕ್ಕವಳಿದ್ದಾಗ ದಿನಾಲೂ ಒಂದೊಂದು ಕಥೆಯನ್ನು ಹೇಳುತ್ತಿದ್ದರು. ಕೆಲ ಸಲ ಇನ್ನೊಂದು ಮತ್ತೊಂದು ಮಗದೊಂದು ಕಥೆ ಹೇಳು ಅಪ್ಪನ ಬಳಿ ಹಠ ಮಾಡುತ್ತಿದ್ದ ನಾನು ಪುಣ್ಯಕೋಟಿಯ ಕಥೆ ಕೇಳಿದ ತಕ್ಷಣ ನನ್ನ ಕಣ್ಣುಗಳಿಂದ ನನಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು, ಕಥೆಯ "ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ" ಸಾಲುಗಳನ್ನು ಕೇಳಿದಾಕ್ಷಣ ದುಃಖ ಉಮ್ಮಳಿಸಿ ಬಂದು ಅಲ್ಲೇ ಅಪ್ಪನ ಹೊಟ್ಟೆಯ ಮೇಲೆ ಅಳುತ್ತ ಬಿಕ್ಕುತ್ತ ನಿದ್ದೆಗೆ ಜಾರುತ್ತಿದ್ದೆ. ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕೇಳಿದಾಗಲೆಲ್ಲ ಅಪ್ಪನ ಹೊಟ್ಟೆಯ ಮೇಲೆ ಆನೆ ಆಡುತ್ತ ಕಥೆ ಕೇಳುತ್ತಿದ್ದ ದಿನಗಳು, ಅಮ್ಮ ನನ್ನನ್ನು ಸಮಾಧಾನಿಸುತ್ತಿದ್ದ ಬಾಲ್ಯದ ಸುಂದರ ಸವಿ ನೆನಪುಗಳು ನೆನಪಾಗಿ, ಕಣ್ಣೀರು ತರಿಸುವ ಈ ಪದ್ಯ ಎಷ್ಟೊಂದು ಸುಂದರವಾಗಿದೆ. ನನ್ನ ಪ್ರಕಾರ ಮಾನವೀಯ ಮೌಲ್ಯಗಳ ಕಲಿಕೆಗೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಈ ಪುಣ್ಯಕೋಟಿ ಗೋವಿನ ಹಾಡು.
  ಮತ್ತೊಮ್ಮೆ ಅಪ್ಪನಿಗಾಗಿ, ಅಮ್ಮನಿಗಾಗಿ, ನನಗಾಗಿ ಮತ್ತು ಈ ಬ್ಲಾಗ್ ಬರಹ ಓದುತ್ತಿರುವ ಎಲ್ಲರಿಗಾಗಿ ಪುಣ್ಯಕೋಟಿ ಗೋವಿನ ಹಾಡಿನ ಸಾಲುಗಳು :

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು

ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.

ಪುಣ್ಯಕೋಟಿಯ ಹಾಡು ವೀಕ್ಷಿಸಲು ಯೂಟ್ಯೂಬ್ ಲಿಂಕ್:
http://youtu.be/UOZNmoWirK4

Sunday 7 December 2014

ಸರಿ-ತಪ್ಪು ಮತ್ತು ಒಪ್ಪು....

ಸರಿ-ತಪ್ಪು ಎನ್ನುವ ಅನುಭವದ ಮಹತ್ತರ ಪಾಠವನ್ನು ಜೀವನದ ತರಗತಿಯಲ್ಲಿ ಎಲ್ಲರೂ ಕಲಿಯಲೇಬೇಕು.
ಸರಿ ಎಂಬುದು ಸರಿ, ತಪ್ಪು ಎಂಬುದು ತಪ್ಪು; ಇದು ಕಾಲ ಸತ್ಯ.
ಈ ಸತ್ಯದ ಅರಿವಿದ್ದರೂ ಕೆಲ ಸಲ ಸರಿಯಾದುದನ್ನು ತಪ್ಪಾಗಿ ತಪ್ಪಾದುದುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಸಂದರ್ಭಗಳು ಒದಗಿ ಬರುತ್ತವೆ.
ಇಂತಹ ಸಮಯದಲ್ಲಿ ಸರಿ-ತಪ್ಪುಗಳು ಎರಡು ವಿಭಿನ್ನ ಆಯ್ಕೆಗಳಾಗಿರುತ್ತವೆ.
ನಮಗೆ ಸರಿ ಕಂಡದ್ದು ಬೇರೆಯವರಿಗೆ ತಪ್ಪಾಗಿ , ಬೇರೆಯವರಿಗೆ ಸರಿ ಕಂಡದ್ದು ನಮಗೆ ತಪ್ಪಾಗಿ ಕಾಣಬಹುದು.
ಹೊಂದಾಣಿಕೆ ಎಂಬುದು ಈ ಸರಿ ತಪ್ಪುಗಳ ಸರಿ ರೂಪ ತೊರುವ ಮಾರ್ಗಸೂಚಿ.
ಹೊಂದಾಣಿಕೆ ಸುಲಭದ ಮಾತೂ ಅಲ್ಲ. ಬೇರೆಯವರ ಅಭಿಪ್ರಾಯ-ಅಭಿರುಚಿಗಳನ್ನು ಗೌರವಿಸುವ ಗುಣವಿದ್ದಲ್ಲಿ ಮಾತ್ರ ಹೊಂದಾಣಿಕೆ ಸಾಧ್ಯ. ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತ ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ.ಇದನ್ನು ಮನಗಂಡು ಸರಿ-ತಪ್ಪುಗಳನ್ನು ಒಪ್ಪಿದಾಗ ಬಾಳು ಸದಾ ಸಮರಸದ ರಸದೌತಣವಾಗಿರುತ್ತದೆ.

Saturday 6 December 2014

ಶಾಶ್ವತ ಸುಂದರ ಸತ್ಯ..

ಪ್ರೀತಿ ಇರುವವರೆಗೆ ಭಾವನೆ..
ಪ್ರೀತಿನೇ ಇಲ್ಲದಮೇಲೇ..??

ಭಾವನೆಗಳು ಇರುವವರೆಗೆ ಆಸೆ..
ಭಾವನೆಗಳೇ ಇಲ್ಲದಮೇಲೇ ..??

ಆಸೆಗಳು ಇರುವವರೆಗೆ ಕನಸು..
ಆಸೆಗಳೇ ಇಲ್ಲದಮೇಲೇ..??

ಕನಸುಗಳು ಇರುವವರೆಗೆ ಹಂಬಲ
ಕನಸುಗಳೇ ಇಲ್ಲದಮೇಲೇ.??

ಹಂಬಲ ಇರುವವರೆಗೆ ಜೀವಂತಿಕೆ
ಹಂಬಲವೇ ಇಲ್ಲದಮೇಲೇ..??

ಜೀವಾ ಇರೋವರೆಗೂ ಜೀವನ..
ಈ ಜೀವಾನೇ ಹೊರಟುಹೋದ್ರೆ..??

ಬದುಕು ಹೀಗೆ ಉತ್ತರಿಸಲಾಗದ ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಪಯಣ..!
ಈ ಪಯಣದಲ್ಲಿ ಯಾವುದು ಶಾಶ್ವತವಲ್ಲಾ..
ಅಳುವಾಗ ನಮ್ಮ ಕಣ್ಣ ಹನಿಯೂ ಕೂಡ ನಮ್ಮನೂ ಬಿಟ್ಟು ಹೊರಟು ಹೋಗುತ್ತೆ,
ಸಂಬಂಧಗಳ ಬಂಧನವೂ ನಮ್ಮನ್ನು ಬಂಧಿಸಿಡದು..
ಕತ್ತಲಾದ ಮೇಲೆ ನಮ್ಮ ನೆರಳೆ ನಮ್ಮನ್ನು ಬಿಟ್ಟು ಹೋಗುವುದಲ್ಲವೇ...??
ಕಷ್ಟಗಳು ಕೂಡ ಹಾಗೆಯೇ, ರಾತ್ರಿಯ ನಂತರ ಹಗಲು ಬರುವಂತೆ ಕಷ್ಟಗಳೂ ಕರಗಿ ಹೋಗುತ್ತವಾದ್ದರಿಂದ ಚಿಂತೆ ದುಃಖ ವ್ಯರ್ಥ..
ಶಾಶ್ವತವಲ್ಲದ ನಾಲ್ಕು ದಿನದ ಈ ಬದುಕಿನಲ್ಲಿ ಎಲ್ಲವೂ ಅಶಾಶ್ವತ..
ಕೊನೆಗಾಲದಲ್ಲಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವ ಈ ಜೀವ ತಾ ಗಳಿಸಿದ ಪ್ರೀತಿ ವಿಶ್ವಾಸ ಸ್ನೇಹ ಸಂಬಂಧಗಳ ಬಂಧ ಪ್ರೀತಿಪಾತ್ರರ ಹೃದಯದ ಕದ ತಟ್ಟಿದ ನೆನಪು ಮಾತ್ರ ಅಜರಾಮರವಾಗಿ ನೆನಪುಗಳ ಗರಿಯಾಗಿ ನವಿರಾಗಿ ಉಳಿಯುವುದು.
ಈ ಸತ್ಯ ಮನವರಿಕೆಯಾದಾಗ ಮಾತ್ರ ಜೀವನ ಸಾರ್ಥಕ ಸುಂದರವಾಗಿರುತ್ತೆ..! :)

Wednesday 3 December 2014

ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)

  ಡಿಸೆಂಬರ್... ಹನ್ನೆರಡು ತಿಂಗಳುಗಳ ವರ್ಷದ ಕೊನೆಯ ತಿಂಗಳು. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತಿರುವ ಈ ತಿಂಗಳಿಗೆ ಸದಾ ಹೊಸತನದ ಆಗಮನದ ಸಂಭ್ರಮ. ಆದರೆ ಬಹುಶಃ ಚಳಿಗಾಲದಲ್ಲಿ ಬರುವುದರಿಂದ ಏನೋ ಗೊತ್ತಿಲ್ಲ ಒಂದು ರೀತಿ ಈ ತಿಂಗಳು ಪ್ರತಿ ಬಾರಿ ಸಂತೋಷದ ಜೊತೆ ಜೊತೆಗೆ ಬೇಸರದ ನಡುಕವನ್ನು ಮೂಡಿಸುತ್ತದೆ.
  ಮನಸ್ಸು ಹೊಸತನದ ನಿರೀಕ್ಷೆ, ಹೊಸ ವರ್ಷದಾಗಮನದ ತಯಾರಿ ನಡೆಸಿರುವಾಗ ನಮಗೆ ಗೊತ್ತಿಲ್ಲದಂತೆ ಮನಸ್ಸು ಮಂಕಾಗಿ ಕಳೆದ ಡಿಸೆಂಬರ್ ತಿಂಗಳಿಗೆ ಹಾರಿ ಬಿಡುತ್ತದೆ. ಕಳೆದ ವರ್ಷ ಮಾಡಿದ ಹೊಸ ನಿರ್ಧಾರಗಳು, ನಮಗೆ ನಾವೇ ಕೊಟ್ಟ ಭರವಸೆಗಳು, ಹೊಸ ವರ್ಷದಲ್ಲಿ ಮಾಡಬೇಕಾದ ಪ್ರವಾಸಗಳು, ಹೊಸ ವರ್ಷದಲ್ಲಿ ಓದಬೇಕೆಂದು ನಿರ್ಧರಿಸಿ ನಿಗದಿಪಡಿಸಿದ ಹೊತ್ತಿಗೆಗಳು, ಮಾಡಬೇಕಾದ ಹೊಸ ಕಾರ್ಯಗಳು, ಕೈ ಬಿಡಬೇಕಾದ ಕೆಲ ಅವಗುಣಗಳು, ರೂಢಿಗತ ಮಾಡಿಕೊಳ್ಳಬೇಕಾದ ಕೆಲ ಹೊಸ ಗುಣಗಳು, ಪಾಠಗಳು, ಪರೀಕ್ಷೆ-ನಿರೀಕ್ಷೆ.. ಹೀಗೆ ಕಳೆದ ವರ್ಷದ things to do this year ಅನ್ನೋ ಲಿಸ್ಟ್ ನ ಹತ್ತು ಹಲವು ನೆರವೇರದ  ಸಂಗತಿಗಳು ಮನದ ಕಿಟಕಿಯಿಂದ ಹೊರ ಇಣುಕಿ ಅಣುಕುತ್ತಿವೆ.
  ಈ ವರ್ಷ ಇದನ್ನು ಖಂಡಿತ ಮಾಡುವೆನು ಎನ್ನುತ್ತ ಪ್ರತಿ ವರ್ಷವೂ ಪ್ರತಿ ಸಲವೂ ನೆರವೇರದ ಸಂಗತಿಗಳ ನೆರವೆರಿಕೆಗೆ ನಮಗೆ ನಾವೇ ಕೊಡುವ ಮಾತಿನ ಭರವಸೆ ಹೇಳು ಹೆಸರಿಲ್ಲದೆ ಪಲಾಯನವಾದ ಪಾಲಿಸುವ, ಅಪೂರ್ಣವಾಗಿ ಉಳಿದ ವಿಷಯಗಳು, ಕೆಲವು ಸಲ ಇವೆಲ್ಲ funny ಅನ್ನೋ feel ಮೂಡಿಸಿದರೂ ಅದನ್ನೆಲ್ಲ ಸೀರಿಯಸ್ ಆಗಿ ಪರಿಗಣಿಸಲೇಬೇಕು.
  ಇವೆಲ್ಲದರ ನಡುವೆ ಈ ವರ್ಷ ಕೊನೆಗೊಳ್ಳುತ್ತಿದೆ ಅನ್ನೋದು ನಂಬಲಸಾಧ್ಯ. ಪರಿಪೂರ್ಣವಾಗಿ ಕಾರ್ಯಗತಗೊಳಿಸಿದ ಕೆಲ ಸಂಗತಿಗಳ ಹೆಮ್ಮೆ ಒಂದೆಡೆಯಾದರೆ ಮತ್ತೊಂದೆಡೆ ಮನಸ್ಸು ಮತ್ತೊಂದು ಹೊಸ ಆಶಯಗಳ, ಹಳೆಯ ಅಪೂರ್ಣ ಕಾರ್ಯಗಳ ಪೂರ್ಣಗೊಳಿಸುವ ಭರವಸೆಗಳ, ಮತ್ತಷ್ಟು ಹೊಸ  ನಿರ್ಧಾರ ಕನಸುಗಳ ಪಟ್ಟಿ ಸಿದ್ಧವಾಗುತ್ತಿದೆ. ಇವೆಲ್ಲವನ್ನೂ ನನಸುಗೊಳಿಸೋ ಆಸೆ ಆಶಾವಾದಿಗಳದ್ದಾದರೆ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆಯಾಯಿತು ಅನ್ನೊ ಗೋಳು ನಿರಾಶಾವಾದಿಗಳದ್ದು.
  ಏನೇ ಆಗಲಿ ಪ್ರತಿ ಕ್ಷಣ ಪ್ರತಿ ದಿನ ಪ್ರತಿ ವರ್ಷ ಎಲ್ಲ ಹೊಸ ಹೊಸತು..
ಹೊಸ ವರ್ಷದ ಬಾಗಿಲಲ್ಲಿ ಹೊಸ ಕನಸುಗಳೊಂದಿಗೆ ಹೊಸ ವರ್ಷದ ಬಾಗಿಲು ತೆರೆದು ಸಂಭ್ರಮಿಸಲು ಕುಟುಂಬ, ಸ್ನೇಹಿತರು, ಬಂಧುಗಳು, ನ್ಯೂ ಇಯರ್ ಪಾರ್ಟಿ, ಫಾರ್ಮ್ ಹೌಸ್ ಹೀಗೆ so many choices... :) :)
ಈ ವರ್ಷ ಕೊನೆಗೊಳ್ಳುತ್ತಿದೆ ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)

Friday 28 November 2014

ನಾವು ನಾವಾಗಿರೋಣ..

   ನಾವು ಅವರಂತಿರಬೇಕು ಅವರಂತೆಯೇ ಆಗಬೇಕು ಅವರಂತಹ ಮನೆ ಕಟ್ಟಬೇಕು ಅವರಂತಹ ಕಾರು ಹೊಂದಬೇಕು... ಅಬ್ಬಬ್ಬಾ ಈ ಅವರು ಇವರುಗಳ ಅನುಕರಣೆಯ ಕಾರುಬಾರು ಮಿತಿಮೀರಿದೆ. ಇವೆಲ್ಲದರ ನಡುವೆ ನಾವು ನಮ್ಮ ಸ್ವಂತಿಕೆಯನ್ನೆ ಮರೆತು ಬಿಟ್ಟಿದ್ದೇವೆ.
ನಾವೇಕೆ ಅವರಂತಾಗಬೇಕು? ನಮಗೂ ಒಂದು ಸ್ವಂತ ವ್ಯಕ್ತಿತ್ವವಿದೆ. ನಮ್ಮತನವೆಂಬುದು ನಮ್ಮೊಳಗೆ ಅಡಗಿ ಕುಳಿತಿದೆ. ಅದನ್ನು ದಕ್ಕಿಸಿಕೊಳ್ಳಬೇಕಷ್ಟೆ. ನಾವೆಲ್ಲ ಬೇರೆಯವರ ಮಾದರಿಯಲ್ಲಿ ಬೆಳೆಯಲು ಪೈಪೋಟಿ ನಡೆಸುತ್ತಿದ್ದೇವೆ ಹೊರತು ನಾವೇ ಮಾದರಿಯಾಗಿರಲು ಹಂಬಲವೂ ಇಲ್ಲ ಪ್ರಯತ್ನವೂ ಇಲ್ಲ.
   ಈ ಸಮಾಜ ಜೀವನದಲ್ಲಿ ಸಾಕಷ್ಟು ಮಾದರಿಗಳು ಸಿಗುತ್ತವೆ, ಅವುಗಳಲ್ಲಿ ಅನುಸರಿಸಬೇಕಾದ ಅಂಶಗಳು ಸಾಕಷ್ಟಿರುತ್ತವೆ. ಒಳ್ಳೆಯದನ್ನು ಹೆಕ್ಕಿ ತೆಗೆದುಕೊಳ್ಳೊಣ ಆದರೆ ಅವರೇ ನಾವಾದರೆ ನಮ್ಮದೆನ್ನುವುದೇನು ಉಳಿಯಿತು? ಒಳ್ಳೆಯದೆಲ್ಲರ ಕ್ರೋಢಿಕರಣದ ರೂಪ ನಮ್ಮೊಳಗೆ ಇಣುಕಲಿ ಅದರೊಂದಿಗೆ ನಮ್ಮತನವೆಂಬ ಸ್ವಂತಿಕೆಯೂ ವಿಜೃಂಭಿಸಲಿ. ವೈವಿಧ್ಯತೆಯಲ್ಲೂ ಏಕತೆ ಮೆರೆವ ಈ ಜಗತ್ತಿನಲ್ಲಿ ಅದೆಷ್ಟೋ ಬಾರಿ ನಾವು ಎಲ್ಲೋ ಕಳೆದು ಹೊಗಿರುತ್ತೇವೆ. ನಮ್ಮ  ಸ್ವಂತ identity ಅನ್ನೋದೆ ಮರೆತಿರುತ್ತೆ.ಅದನ್ನು ಗಳಿಸೊದಷ್ಟೇ ಅಲ್ಲ ಊರ್ಜಿತಗೊಳಿಸೋದು ನಿಜವಾದ ಸವಾಲು.
   ಎಲ್ಲರಿಂದ ಇದು ಸಾಧ್ಯವಿಲ್ಲ, ನಾನೇನು ಮಹಾನುಭಾವ ಎನಿಸಿಕೊಳ್ಳಬೇಕಿಲ್ಲ, ನಾನು ಯಾವುದಕ್ಕೂ ಮುಂದಾಳತ್ವ ವಹಿಸಬೇಕಿಲ್ಲ, ಬದುಕಿದಷ್ಟು ದಿನ ನನ್ನ ಪಾಡಿಗೆ ನಾನಿದ್ದುಬಿಡುತ್ತೇನೆ ಅನ್ನೊದ್ರಲ್ಲಿ ಏನು ವಿಶೇಷವಿದೆ? ಪ್ರಾಣಿಗಳೂ ಹಾಗೆಯೇ ಬದುಕುತ್ತವೆ ಅಲ್ಲವೇ? ಹಾಗಿದ್ದಲ್ಲಿ ನಮಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಉಳಿದಂತಾಯ್ತು?
   ಈ ಬದುಕಿನಲ್ಲಿ ನಾವು ನಾವಾಗಿ ಬಾಳಬೇಕು. ನಮ್ಮ ನಂತರವೂ ನಮ್ಮತನ ಉಳಿಯಬೇಕು.
ನಮ್ಮೊಳಗಿನ ನಮಗೆ ಯಾವತ್ತೂ ಅಳಿವೆನ್ನುವುದು ಇರಲೇಬಾರದು ಎಂದು ನಿರ್ಧಾರ ಮಾಡಿ ಸಕಾರಾತ್ಮಕ ಮಾರ್ಗವನ್ನೇ ಸದಾ ಅನುಸರಿಸೊಣ.
ಅವರಿವರ ಸಂತೆ ಬಿಟ್ಟು copy cats ಆಗೊ ಬದಲು copyrighted ಆಗಿರೊಣ......��

Tuesday 11 November 2014

ಖುಷಿ unlimited.....

ಇವತ್ತು ಬೆಳಿಗ್ಗೆ ನನ್ನ ಕೊಲಿಗ್ ಒಬ್ರು ಕೇಳ್ತಾ ಇದ್ರು
'ಏನ್ ಮೇಡಂ ಖುಷಿ-ಖುಷಿಯಾಗಿದ್ದಿರಿ, ಎನ್ ಸ್ಪೆಷಲ್ ?' ಅಂತ, ನನಗೆ ಆಶ್ಚರ್ಯ ಆಯ್ತು, ಖುಷಿಯಾಗಿರೋಕು ಒಂದು ಕಾರಣ ರೀಸನ್ ಅಂತ ಸ್ಪೆಷಲ್ ಆಗಿ ಬೇಕಾ? Actually ಖುಷಿ ಡಿಫೈನ್ ಮಾಡೋದು ತುಂಬಾ ಕಷ್ಟ. ಖುಷಿ ಅನ್ನೋದು ಲೈಫಲ್ಲಿ ಒಂಥರಾ ಆಕ್ಸಿಜನ್ ಇದ್ದಂತೆ ಪೂರೈಕೆ ಕಡಿಮೆ ಆದಷ್ಟು ಆಯಸ್ಸು ಕುಂಠಿತ ಆಗುತ್ತೆ. ಖುಷಿಯಾಗಿರೋದೆ ಜೀವನ ಹೊರತು ಖುಷಿನ ಹುಡುಕುವುದ್ರಲ್ಲೇ ಕಾಲ ಕಳೆಯೋದು ಜೀವನ ಅಲ್ಲ.
ಖುಷಿ ಅನ್ನೋದು ಹುಡುಕ್ತಾ ಹೋಗೊ ವಸ್ತುನೂ ಅಲ್ಲ ಆದರೆ ನಮ್ಮೊಳಗಿರುವ ಮನದ ಒಂದು ಭಾವ.
ಖುಷಿ ಪರ್ಫ್ಯೂಮ್ ಇದ್ದ ಹಾಗೆ ಹೊದಲ್ಲೆಲ್ಲ ಖುಷಿಯ ಪರಿಮಳ ಪಸರಿಸಬಲ್ಲದು.. ನಾವೆಷ್ಟೇ ಒತ್ತಡದಲ್ಲಿ ಇದ್ದಾಗ ಒಂದು ಸುಂದರ ಸ್ಮೈಲಿಯನ್ನೋ ಅಥವಾ  ಕುಟುಂಬದ/ಪ್ರಿಯವಾದವರ ಫೊಟೊ ನೋಡಿ, ನಮಗೆ ಗೊತ್ತಿಲ್ದೇ  ಒಂದು  ಸ್ಟೈಲ್ ನಮ್ಮ ಮುಖದಲ್ಲೂ ಹಾದು ಹೋಗಿರುತ್ತೆ, ಹಾಗೇ ಒಂದು ಮುಗ್ಧ ಮಗುವಿನ ನಗು ನೋಡಿದಾಗ, ಕುಟುಂಬದ ಸದಸ್ಯರು/ಸ್ನೇಹಿತರು ಹರಟುತ್ತ ನಗುತ್ತಿರೋವಾಗ ಕಾರಣ ತಿಳಿದೇ ಇದ್ರೂ ನಾವೂ ಅವರೊಟ್ಟಿಗೆ ನಕ್ಕುಬಿಡುತ್ತೇವೆ. ಇದೇ ತಾನೇ ಖುಷಿಯ ಮ್ಯಾಜಿಕ್?
ಖುಷಿಗೆ ಹಲವು ಮುಖಗಳು. ಕೆಲವರಿಗೆ ಖುಷಿ ಅಂದ್ರೆ ಫೈವ್ ಸ್ಟಾರ್ ಹೋಟೆಲ್ ಊಟ, ಇನ್ನು ಕೆಲವರಿಗೆ ಬೀದಿ ಬದಿಯ ಪಾನಿ ಪೂರಿ. ಕೆಲವರಿಗೆ ಮಾರಿಷಸ್ ನಲ್ಲಿ ರಜೆ ಕಳೆಯೊದಾದ್ರೆ ಇನ್ನು ಕೆಲವರಿಗೆ ರಜೆಯ ಎಲ್ಲ ದಿನಗಳನ್ನು ಊರಲ್ಲಿರೋ ಅಮ್ಮ ಅಪ್ಪ ಕುಟುಂಬದೊಂದಿಗೆ ಕಳೆಯೋದು. ಹೀಗೆ ಹಲವು ರೀತಿ..
ನನಗಂತೂ ಖುಷಿ ಅಂದ್ರೆ ಪುಟ್ಟ ಪುಟ್ಟ ಸಂಗತಿಗಳಲ್ಲಿ ಖುಷಿ ಕಾಣೋದು, ಖುಷಿಯಾಗಿರೋದು, ಅಪ್ಪ ಅಮ್ಮ ತಂಗಿಯರೊಡನೆ ಕಾಲ ಕಳೆಯೋದು, ಗಾಡ್ಸ ಗಿಫ್ಟ್ ಅನ್ನೊ ತರಹ ಸಿಕ್ಕಿರೊ ಬಿಗ್ ಜಾಯಿಂಟ್  ಫ್ಯಾಮಿಲಿ ಜೊತೆ ಎಂಜಾಯ್ ಮಾಡೋದು, ಪ್ರಕೃತಿನಾ ಆಸ್ವಾದಿಸೋದು, ಸುಂದರ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯೋದು,
ಬೆಸ್ಟ್ ಫ್ರೆಂಡ್ಸ ಜೊತೆ ಕೆಲ ಹೊತ್ತು ಮಾತು ಹರಟೆ,
ಪುಸ್ತಕಗಳ ಲೋಕದಲ್ಲಿ ಮುಳುಗಿ ಹೋಗೋದು,ಓದು-ಬರಹ, ಒಂದಿಷ್ಟು ಒಳ್ಳೆ ಸಿನಿಮಾ ಸಂಗೀತ ಕೇಳೊದು, ನನ್ನ ಫೆವರಿಟ್ ಮ್ಯೂಸಿಕ್ ಲಿಸ್ಟ್ ರಿಪ್ಲೇ ಮಾಡೋದು.... ಹೀಗೆ ಖುಷಿ unlimited.. :)

ಖುಷಿಯ ಹುಡುಕಾಟ ನಿಲ್ಲಿಸಿ ಖುಷಿಯಾಗಿರಿ ಖಂಡಿತ ಖುಷಿ ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ..
So be happy always..��
Sabbe satta bhavanthu sukhitatta..��
May all beings be happy.. :) :)

Sunday 9 November 2014

ಹಾಗೆ ಸುಮ್ಮನೆ....

ಬದುಕು ಈ ನಡುವೆ ನನಗೆ ತಿಳಿಯದಂತೆ ಮಿಂಚಿನ ಓಟಕ್ಕಿಳಿದಿದೆ.. ಕಾಲೇಜು-ಮನೆ,ಪಾಠ-ತರಗತಿ, ಓದುಗಳ ಮಧ್ಯೆ ಸಮಯ ಸಾಗುವ ಪರಿ ಅರಿವಿಗೆ ಬರುತ್ತಿಲ್ಲ.. ದಿನನಿತ್ಯದ ಆದ್ಯತೆಗಳ ನಡುವೆ ನಾನೆಲ್ಲೋ ಕಳೆದು ಹೋಗುತ್ತಿರುವ ಭಾವ ಕಾಡುತ್ತಿದೆ..
ಸುಂದರ ಸೂರ್ಯೋದಯ ಸೂರ್ಯಾಸ್ತ ನೋಡದೇ
ದಿನಗಳೇ ಕಳೆದವು, ಈ weekend ಖಂಡಿತ ಊರಿಗೆ ಬರುವೆ plan pakka ಅಂತ ಅಣ್ಣ-ಅಕ್ಕಂದಿರಿಗೆ
ಕೊಟ್ಟ ಭರವಸೆಗೆ, ಅಮ್ಮ- ಅಪ್ಪ ಪುಟ್ಟ ತಂಗಿಯರ ಜೊತೆ ಕುಳಿತು ಹರಟೆ ಹೊಡೆದು ಸುಮಾರು ತಿಂಗಳುಗಳೇ ಉರುಳಿದವು.. ಅಬ್ಬಾ ಈ ಸಮಯ ಅನ್ನೋದು ಮಾರ್ಕೆಟ್ನಲ್ಲಿ ಸಿಗುವ ವಸ್ತುವಾಗಿದ್ರೆ ನಾನೇ ಎಲ್ಲ ಖರೀದಿ ಮಾಡಿ ಬಿಡ್ತಿದ್ನೇನೋ...
ಸಮಯ ಸಿಕ್ಕಾಗಲೆಲ್ಲ ತೋಚಿದ್ದು ಗೀಚಲು, ಒಂದಿಷ್ಟು ಕನಸು,ಮಾತು,ಕಥೆ,ಚಿತ್ರ,ಸ್ಪೂರ್ತಿ, ಭಾವನೆಗಳಿಗೆ ಅಚ್ಚೊದಗಿಸುವ ನಿಟ್ಟಿನಲ್ಲಿ ಬ್ಲಾಗ್ ಬರೆಯುವ ಪ್ರಯತ್ನ..
ನಾನು ತೋಚಿದ್ದನ್ನು ಗೀಚಿದಾಗಲೆಲ್ಲ ನನ್ನನ್ನು ಪ್ರೀತಿಯಿಂದ ಬರೆಯುವ ಪ್ರಯತ್ನಕ್ಕೆ ಪ್ರೇರೆಪಿಸಿದ ನನ್ನ ಅಪ್ಪ-ಅಮ್ಮ ,ಮುದ್ದು ತಂಗಿಯರು, ಅಣ್ಣ ಅಕ್ಕಂದಿರು ಮತ್ತು ಎಲ್ಲ ಸಹೃದಯಿಗಳಿಗೆ, ಅಕ್ಕನ ಪುಟ್ಟ ಪಾಪು
"ಸಮನ್ವಿತಾ"ಳಿಗೆ ಈ ಬ್ಲಾಗ್ ನ ಮೊದಲ ಪುಟ ಸಮರ್ಪಣೆ..
ಹಾಗೆ ಸುಮ್ಮನೆ ಒಂದಿಷ್ಟು ಕನಸು ಸ್ಪೂರ್ತಿ ಮಾತುಗಳ ಅಭಿಪ್ರಾಯ ಅನಿಸಿಕೆಗಳ ಚಿತ್ರ-ಕಥೆ ಭಾವ-ಲಹರಿ ಇಂದಿನಿಂದ..