Saturday 17 October 2015

ಕನಸಿನ ಪ್ರೀತಿಯ ಸಾಲುಗಳು..

    ಅಚ್ಚಿ ನಿನ್ನ್ಮದುವೆ ಯಾವಾಗ ನೀ ಹಿಂಗೆ ಅದು ಬೇಡ ಇದು ಬೇಡ ಅಂಥ ಕಾಲ ನೂಕ್ತಿದ್ರೆ ಹೇಗೆ? Life is not a fairy tale ಸುಮ್ನೆ ಕನಸಿನ ಗೋಪುರ ಕಟ್ಬೇಡ ಅಂತ advice ಮಾಡಿದ ಸ್ನೇಹಿತೆಯೊಡನೆ ವಾದ-ವಾಗ್ವಾದ ಮುಗಿದ ನಂತರ ಹೇಗಿರಬೇಕು ನಿನ್ನ ಕನಸಿನ ಹುಡುಗ ಎಂದವಳು ಕೇಳಿದ ಪ್ರಶ್ನೆಗೆ ಈ ಸರಿ ರಾತ್ರಿಲಿ ಉತ್ತರ ನೀಡ್ಲೇಬೇಕಾ?ಉತ್ತರ ಕೇಳಿದ್ರೆ ನೀ ಬೆಚ್ಚಿ ಬೀಳ್ತಿ, ಇವಾಗ ಸುಮ್ನೆ ಮಲಗು ಟೈಮ್ ಸಿಕ್ಕಾಗ ನಾನೇ ನನ್ನ dream boy,dream life ಬಗ್ಗೆ  ಬ್ಲಾಗನಲ್ಲಿ ಬರೆಯುವೆ ಓದ್ಕೋ ಎಂದು ಹೇಳಿ ಸಾಂಗ್ಸ್ ಕೇಳ್ತಾ ನಿದ್ರೆಗೆ ಜಾರ ಹೊರಟ ನನ್ನ ಮನದ ಕಿಟಕಿಯಿಂದ ಇಣುಕಿದ್ದು ನನ್ನ ಕನಸಿನ ಹುಡುಗ.. ಕಾಕತಾಳೀಯವೋ ಏನೋ ಎಂಬಂತೆ ಅಂದು ಮೊಬೈಲ್ ಪ್ಲೇ ಲಿಸ್ಟನಲ್ಲಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುದ್ದವು. ಅವನ್ಯಾರೋ ಒಂದಿನ ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ ನನಗೆ ನಾನೇ..ಆಲೋಚನೆ ಆರಾಧನೆ ಎಲ್ಲ ಅವನದ್ದೇ ಆಗಿತ್ತು ಅಂದು.ಆ ಕನಸುಗಳಿಗೂ ಬಹುಶಃ ಒಂದು ಪರಿಧಿ,ಮಿತಿ, ವ್ಯಾಪ್ತಿ ಎಂಬುದಿಲ್ಲ ಮತ್ತು ಪಿಟೀಲು ಕುಯ್ಯೋದನ್ನು ನಂಗೆ ಹೇಳ್ಕೊಡ್ಬೇಕಿಲ್ಲ. ಹಾಗೆ ಸುಮ್ಮನೆ ಬ್ಲಾಗಿನ ಡ್ರಾಫ್ಟ್‌ ಬಾಕ್ಸಿನಲ್ಲಿ ಅವಿತು ಕುಳಿತ ಆ ದಿನ ಗೀಚಿಟ್ಟ ನನ್ನ ಕನಸ ಸಾಲುಗಳಿಗೆ ರೆಕ್ಕೆ ಬಂದು ನಿರೀಕ್ಷೆಯಂತೆ ಸಿಕ್ಕ ನನ್ನ ಪ್ರೀತಿಯ ಯಶದ ಮನದ ವಿಳಾಸಕ್ಕೆ ಹಾರ ಹೊರಟಿವೆ.
   ಅವನೆಂದರೆ ನನ್ನ ಪ್ರಪಂಚವಾಗಿರ್ಬೇಕು..ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು ಹಾಗೇ ಅವನೂ ಕೂಡ..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಬದುಕು ಭಾವಗೀತೆಯಾಗ್ಬೇಕು..ಭಾವಜೀವಿ ನಾನಾದರೆ ಅದರ ಭಾವನೆ ಅವನಾಗಿರಬೇಕು..ನನ್ನೊಲವ ದಾರಿಯಲಿ ಬರಬೇಕೆನ್ನುವ ಆ ನನ್ನ ಪ್ರೀತಿಯ ಹುಡುಗನೊಡನೆ ಹಾಕುವ ಪ್ರತೀ ಹೆಜ್ಜೆಯ ಗುರುತುಗಳಲ್ಲಿ ಪ್ರೀತಿಯ ಕನಸುಗಳಿರಬೇಕು. ಕೈ ಹಿಡಿದು ಸಾಗುವ ಬಾಳ ಪಯಣದ ಕಂಗಳಿಗೆ ಕಣ್ರೆಪ್ಪೆಯಂತೆ ಅವನ ಕಾವಲಿರಬೇಕು..ಆ ಮನಸು ಕನಸುಗಳ ಪಿಸುಮಾತುಗಳಿಗೆ ಪ್ರೀತಿ ದನಿಯಾಗಬೇಕು. ವಾತ್ಸಲ್ಯಭರಿತ ಬದುಕ ಕಟ್ಟಬೇಕು.. ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಅವನೇ ಹೆಸರಾಗಬೇಕು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಸನಿಹ ಸುಳಿಯಲಾರದು.. ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ, ಅದೇ ನಗುವಿನ ಪ್ರತಿಫಲನ ನಮ್ಮ ಪ್ರೀತಿಯನ್ನೇ ನೆನಪಿಸುವಂತಿದ್ದರೆ ನಾ ಎಂದಿಗೂ ನಗುತ್ತಲೇ ಇರುವೆ.. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನ್ನೆಲ್ಲ ಒಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ನಲ್ಲಿ ಕಟ್ಟಿಸಿಡಬೇಕು..ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು, ಅವನಿಗೆ ನಾನೆಂಬ ಸೆಕ್ಯೂರ್ ಫೀಲ್ ಇದ್ರೆ ಸಾಕು
ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ಇನ್ನೇನು ಬೇಕು..ಹುಣ್ಣಿಮೆ ಬೆಳದಿಂಗಳಲ್ಲಿ ಅವನ ಮಡಿಲಲ್ಲಿ ಮಲಗಿ ಇಬ್ಬರೂ ಸೇರಿ ಚಂದ್ರನ ಅಂಗಳದಿ ಮೂಡಿರೋ ಚುಕ್ಕಿಗಳ ಲೆಕ್ಕ ಹಾಕಬೇಕು. ಮರೆಯಾಗದೇ ಇರುವ ಹುಚ್ಚು ಕನಸುಗಳಿಗೆ ನನಸೆಂಬ ಗೇಟ್ ಪಾಸ್ ಕೊಟ್ಟರೆ ಬದುಕು ಅದೆಷ್ಟು ಸುಂದರ..
   ಸಂಬಂಧಗಳು ಭದ್ರವಾಗಿರಬೇಕು.ಬಾಂಧವ್ಯದ ಬೆಸುಗೆಯಲ್ಲಿ ನನ್ನದೊಂದು ಪ್ರೀತಿಯ ಪಾಲಿದ್ದರೆ ಅವನದೊಂದಿರಬೇಕು.. ಆಶಿರ್ವಾದ, ಹಾರೈಕೆಗಳ ಜೋಗುಳದ ಹಾಡಿನಲ್ಲಿ ಒಂದು ಸ್ವರ ನನ್ನದಾದರೆ ಮತ್ತೊಂದು ಅವನದಾಗಿರಬೇಕು..ಸುಂದರ ಬಾಳ ಪಯಣದಲ್ಲಿ ನನ್ನದೊಂದು ಹೆಜ್ಜೆಯಾದರೆ ಅವನದೊಂದಿರಬೇಕು.. ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಹೆಚ್ಚು ಹೆಚ್ಚು ಪ್ರೀತಿಗಳಿಂದ ಪ್ರೀತಿಯಲಿ ತೇಲಿಸುವಂತಿರಬೇಕು. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ದಿನ ಆರಂಭವಾಗಬೇಕು..ಭಟ್ಟರ ಹಾಡಿನ ನನ್ನ favourite ಸಾಲಿನ ಪ್ರೀತಿಯಂತೆ ಅವನಿರದ ಯಾವ ಸ್ವಪ್ನವೂ ಕೂಡ ಈ ನನ್ನ ಕಂಗಳಿಗೆ ಬೇಡವೇ ಬೇಡ..ಏನೇ ಆದರೂ ನಾನೆಲ್ಲೇ ಹೋದರೂನು ಅವನ ಜೀವ ನನ್ನಲ್ಲೇ ಇರುವಂತೆ ಅವ ನನ್ನ ಹಿಂಬಾಲಿಸಬೇಕು.ಖುಷಿಯಲ್ಲಿ ಅವನನ್ನು ಬಿಗಿದಪ್ಪಿ ನಾ ಬಿಕ್ಕಿ ಮನಸಾರೆ ಅತ್ತುಬಿಡಬೇಕು ಹೀಗೆ ಅಚ್ಚು ಮೆಚ್ಚಾಗಿರುವ ನನ್ನ ಭಾವ ಸರಿತೆಯಲ್ಲಿ ಅಚ್ಚಿನ ದೋಷಗಳು ಎಂದಿಗೂ ಮೈದೋರದೆ ಬಾಳು ಜೀವನದಿಯಾಗಿ ಹರಿಯಬೇಕು.
   ನಾ ಹಣತೆ ಹಚ್ಚಿದರೆ ಅದರ ಬೆಳಕು ಎಂದೆಂದಿಗೂ ಅವನಾಗಬೇಕು.. ಬಾನಂಗಳದಿ ಮೂಡಿದ ಸೂರ್ಯೋದಯ ಸೂರ್ಯಾಸ್ತದ ಸುಂದರ ಚಿತ್ತಾರ, ತುಂತುರು ಮಳೆಯ ಸಿಂಚನವ ಸವಿಯಬೇಕು ಬಿಸಿ ಬಿಸಿ ಕಾಫಿಯೊಡನೆ ಇಬ್ಬರೂ. ಖಾಲಿಯಾಗದ ಒಂದಷ್ಟು ಭಾವನೆಗಳ ಲೋಕದಲಿ ನಾನು ಅವನು ಮಾತ್ರ ಇರಬೇಕು ಬದುಕಿನಲ್ಲಿಯ ಬದುಕು ನಾವಾಗಬೇಕು..
   ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಮಾತುಗಳು ಕೇಳಿಸುತ್ತಿರುವಂತೆ ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ನನ್ನ ಪ್ರತೀ ಮೌನದಲ್ಲೂ ಅವನ ಧ್ವನಿ ಹೊರಹೊಮ್ಮಿಸಬೇಕು. ಸಮಯ ಸಿಕ್ಕಾಗಲೆಲ್ಲ ಔಟಿಂಗ್ ನೆವದಲ್ಲಿ ಅಲೆಮಾರಿಗಳಂತೆ ಊರೂರು ಸುತ್ತಬೇಕು.ಕಣ್ಣಿನ ಕ್ಯಾಮರಾದಲ್ಲಿ ಮತ್ತು ಕ್ಯಾಮರಾದ ಕಣ್ಣಲ್ಲಿ ತೆಗೆಯುವ ಪ್ರತೀ ಫೋಟೋವನ್ನು ಹೃದಯದಲಿ ಕಟ್ಟಿಸಿಡಬೇಕು. ಸಮುದ್ರದ ದಡದಲ್ಲಿ ನಾ ಕಟ್ಟುವ ಮರಳ ಪುಟ್ಟ ಗುಬ್ಬಚ್ಚಿ ಗೂಡಿಗೆ ಅವ ಗುಬ್ಬಿಯಾದರೆ ನಾ ಗುಬ್ಬಿಮರಿಯಾಗಬೇಕು.. ನಮ್ಮ ಪ್ರೀತಿ ನೋಡಿ ಹೊಟ್ಟೆಕಿಚ್ಚಿನಿಂದ ಅಬ್ಬರಿಸುವ ಕಡಲ ಸೂರ್ಯಾಸ್ತಕ್ಕೆ ಏಕಾಂತದಲ್ಲಿ ಇಬ್ಬರೂ ಸಾಕ್ಷಿಯಾಗಬೇಕು. ಅಲೆಗಳಾಗಿ ಬರುವ ಖುಷಿಯಲ್ಲೂ, ಬೇಸರದ ಬೇಗುದಿಯಲ್ಲೂ ಆಸರೆಯಾಗುತ್ತ ಸೊಗಸಾದ ಮೌನದ ಗಳಿಗೆಯಲ್ಲೂ ಪ್ರೀತಿಯ ಕನವರಿಕೆ ಪುಟದ ಮರೆಯಲ್ಲಿ ಇಣುಕುತ್ತಿರಬೇಕು.
ಬೆಳದಿಂಗಳಲಿ ಕೈಹಿಡಿದು ಒಬ್ಬರಿಗೊಬ್ಬರು ಕೈ ತುತ್ತ ತಿನ್ನಿಸುತ್ತ ಮತ್ತೊಮ್ಮೆ ಮಗದೊಮ್ಮೆ ನೂರು ವರುಷ ಜೊತೆ ಜೊತೆಯಲಿ ಕಳೆಯಬೇಕು ..
     ಅವನ್ಯಾರೋ ಏನ್ ಮಾಡ್ತಿದ್ದಾನೋ ಆ ಹೊತ್ತಿಗೆ ಅಂತೆಲ್ಲ ಎಷ್ಟೋ ಸಲ ಯೋಚಿಸಿದ್ದೆ..ನನ್ನ ಪ್ರೀತಿಯನ್ನೆಲ್ಲ ಜತನದಿಂದ ಹೃದಯದ ಪುಟ್ಟ ಗೂಡಿನಲ್ಲಿ ಜೋಪಾನವಾಗಿ ಕೂಡಿಟ್ಟಿರುವೆ. ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದ, ಗೊತ್ತಿಲ್ಲದ ನನ್ನ ಪ್ರೀತಿಯ ಹುಡುಗನಿಗೆ ಬರೆದು ಭದ್ರವಾಗಿ ಇರಿಸಿದ್ದೆ. ನಾ ಹೇಗೆ ಯೋಚಿಸ್ತಿನೋ ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸ್ತಾನೇನೋ.. ಭಾವನೆಗೆ ಬೇಕಿಲ್ಲ ರೂಪ ಬಣ್ಣ..ನಮ್ಮಿಬ್ಬರಲೂ ಅರ್ಥ ಮಾಡಿಕೊಳ್ಳುವ ಮನಸ್ಸೊಂದಿದ್ದರೆ ನನ್ನ ಹೃದಯದಲಿ ಎಂದೂ ಗುನುಗುನಿಸುವ ಹಾಡು ಅವನದ್ದೇ ಹಾಗೇ ಅವನ ಹೃದಯದಲಿ ಗುನುಗುನಿಸುವ ಹಾಡು ನಾನಾಗಿರಬೇಕು. ನನ್ನ ಮನ ಯೋಚಿಸುವ ಪ್ರತೀ ಕ್ಷಣವೂ ಅವನೇ ಆಗಿರಬೇಕು..ನಮ್ಮ ಬಗೆಗಿನ ನಮ್ಮ ಭಾವನೆಯಲ್ಲಿಯೇ ಬದುಕು ಕಟ್ಟೋಣ.. ಡಿಸ್ನಿ ಲ್ಯಾಂಡಿನ ಫೇರಿಟೆಲ್ ಮೂವಿಗಳಂತೆ ಲೈಫ್ "Happily ever after" ಅನ್ನೋ ತರಹ ಇರಬೇಕು.
   ನಾ ಕಂಡ ಕನಸುಗಳೆಂಬ ನಕ್ಷತ್ರಗಳ ರಾಶಿ ರಾಶಿಗಳೆಷ್ಟೋ..ಅವುಗಳಲ್ಲಿ ನನಸಾಗುವುದೆಷ್ಟೋ.. ಒಂದೂ ತಿಳಿದಿಲ್ಲ.. ಆದರೆ ಅವನ ಬಗೆಗಿರುವ ಭರವಸೆಯೊಂದೇ ಬದುಕಿಗೆ ಚಿರಕಾಲ ಜಿನುಗುತ್ತಿರುವ ನಲುಮೆಯ ಸ್ಪೂರ್ತಿ..

#ಕನಸುಗಳು copyrighted & ಹಕ್ಕುದಾರನಿಗೆ ಪ್ರೀತಿಯಿಂದ dedicated..