Sunday, 5 March 2017

ಹೀಗೂ ಉಂಟೇ??!!

ಜೀವನದಲ್ಲಿ ಒಂದು ರೋಚಕ ಅನುಭವ,ಒಂದೆಡೆ ಯೋಚನೆ/ಆಲೋಚನೆ /ಆತಂಕ, ಮತ್ತೊಂದೆಡೆ ಜೀವನದಲ್ಲಿ ಮಹತ್ತರ ಏನೋ ಸಾಧನೆ ಮಾಡಿದ ಖುಷಿ/ಹೇಳಲಾಗದ/ಮರೆಯಲಾಗದ ಅದ್ಭುತ ಅನುಭವ! ಅನುಭವಿಸಿದವರಿಗೇ ಗೊತ್ತು.....!
  ನಾನು ಇಂದು ಸುಮ್ಮನೆ ನನ್ನ ರೂಮಿನ ಪಕ್ಕದಲ್ಲಿ ಕುಳಿತು, ಅನತಿ ದೂರದಲ್ಲಿ ಕಾಣುವ ಬೆಟ್ಟವನ್ನು ನೋಡುತ್ತಾ ಕೆಲಸಕ್ಕೆ ಬಾರದ ಆಲೋಚನೆಗಳನ್ನು ಮಾಡುತ್ತಿದ್ದೆ, ಸುಮ್ಮನೆ ಎಲ್ಲಿಂದಲೋ ಹಾರಿ ಬಂತೊಂದು ಹಕ್ಕಿ, ಹಕ್ಕಿ ಹಾರಿ ಬಂದು ನನ್ನ ಎದುರಲ್ಲಿ ಕುಳಿತದ್ದಕ್ಕಾಗಿ ಮಾತ್ರ ಆ ಹಕ್ಕಿಯ ಇರುವಿಕೆ ನನಗೆ ತಿಳಿಯಿತಲ್ಲವೇ??! ಹಾಗಾದರೆ ಪ್ರಪಂಚದ ಅಷ್ಟು ಹಕ್ಕಿಗಳು ನನಗೆ ಕಾಣಲು ಸಾದ್ಯವೇ?? ಖಂಡಿತ ಸಾದ್ಯವಿಲ್ಲ! ಅಂದ ಮಾತ್ರಕ್ಕೆ ಆ ಹಕ್ಕಿಗಳೇ ಇಲ್ಲ ಎನ್ನುವುದು ತಪ್ಪಲ್ಲವೆ??!
ಇದೇ ತರ್ಕವನ್ನು ಕಾಲೇಜಿನ ಪರೀಕ್ಷೆಗೆ ಹೋಲಿಸಿ ನೋಡಿದರೆ, ನಾನು ಬರೆದಷ್ಟು ಮಾತ್ರ, ಕರೆಕ್ಷನ್ ಮಾಡುವವರಿಗೆ ಕಾಣಿಸುತ್ತದೆ! ಹಾಗಾದರೆ ಬರೆಯದೆ ಇರುವುದು ನನಗೆ ಗೊತ್ತಿಲ್ಲ ಎಂದು ಅರ್ಥವೇ?!
ಬಹುಷಃ ಗೊತ್ತಿದ್ದರು ನೆನಪಿಲ್ಲದಿರಬಹುದು ಅಲ್ಲವೇ?! ಇದೆಲ್ಲ ಬರಿಯ ಆಲೋಚನೆಗಳು ಅಷ್ಟೇ, ಎಷ್ಟೋ ಬಾರಿ ನಾವು ಬೇರೆಯವರ ಮೌನವನ್ನು ನೋಡಿ ಅವರಿಗೆ ಏನು ಗೊತ್ತಿಲ್ಲ ಎಂದು ತಿಳಿದು ಸುಮ್ಮನಾಗಿರುತ್ತೇವೆ, ಆದರೆ ಗೊತ್ತಿರುವವರೆಲ್ಲರು ಪ್ರಚುರ ಪಡಿಸಬೇಕೆಂದೇನು ಇಲ್ಲ, ಬರೆದವನು ಮಾತ್ರ ಕವಿ ಅಲ್ಲ, ಎಷ್ಟೋ ಬಾರಿ ಬರೆಯದೆ ಸುಮ್ಮನೆ ಕುಳಿತವನು ಕೂಡ ಕವಿಯೇ, ಈ ರೀತಿಯ ಆಲೋಚನೆಗಳು ತಲೆಯಲ್ಲಿ ಓಡಾಡುತ್ತಲೇ ಇತ್ತು, ಆದರೆ ಪರ್ವತ ಮಾತ್ರ ಹಾಗೆ ನಿಂತಿತ್ತು, ಅದನ್ನು ನಾವು ಪರ್ವತ ಎಂದು ಯಾಕೆ ಕರೆಯಬೇಕು ನದಿ ಎಂದು ಕರೆದರೆ ತಪ್ಪೇ?? ಎಂತಾ ಹುಚ್ಚು ಪ್ರಶ್ನೆ ಅಲ್ಲವೇ?! ಪ್ರಪಂಚದ ಎಲ್ಲಾ ಜಡ,ಜೀವಂತ ವಸ್ತುಗಳನ್ನು ನಾವು ಭಾಷೆ ಹಾಗೂ ಅಕ್ಷರಗಳಲ್ಲಿ ಕಟ್ಟಿ ಹಾಕಿದ್ದೇವೆಲ್ಲ? ಪರ್ವತವನ್ನು ನದಿ ಎಂದು ಕರೆದ ಮಾತ್ರಕ್ಕೆ ಅದು ನೀರಾಗಿ ಹರಿದು ಬಿಡುವುದೇ? ಅಥವಾ ನದಿಯನ್ನು ಪರ್ವತ ಎಂದರೆ ಅದು ಜಡವಾಗಿ, ಎತ್ತರವಾಗಿ ನಿಂತು ಬಿಡುವುದೇ?! ನಾಳೆಯಿಂದಾ ಹುಟ್ಟುವ ಮಕ್ಕಳಿಗೆಲ್ಲ ನಾಯಿಯನ್ನು ತೋರಿಸಿ ಸಿಂಹ ಎಂದು ಹೇಳಿಕೊಡೋಣ ಎಂದು ಪ್ರಪಂಚದಾದ್ಯಂತ ಒಂದು ಕರಾರು ಮಾಡಿ ಬಿಡೋಣಾ, ಆಗ ಆ ಮಕ್ಕಳು ನಾಯಿಯನ್ನೇ ಸಿಂಹ ಎಂಬ ಭಾವನೆಯೊಂದಿಗೆ ಕರೆಯಲಾರಂಭಿಸುತ್ತವೆ, ಅಂದ ಮಾತ್ರಕ್ಕೆ ನಾಯಿ ಸಿಂಹವಾಗಿ ಬದಲಾಗುವುದೇ?! ಸಿಂಹ ನಾಯಿಯಾಗಿ ಮನೆಯ ಎದುರಿಗೆ ರೊಟ್ಟಿ ತಿನ್ನಲು ಕಾಯುತ್ತಾ ಕೂರುವುದೇ?!
   ಈ ಹುಚ್ಚು ಆಲೋಚನೆಗಳಲ್ಲೇ ನನಗೆ ತೋರಿದ ಪ್ರಶ್ನೆ ನಾನು ಯಾರು? ಹೌದು ನಾನು ಯಾರು??! ನನ್ನ ಹೆಸರಿನಿಂದ ನನ್ನನ್ನು ಗುರುತಿಸಬಹುದು, ಆದರೆ ಆ ಹೆಸರನ್ನು ಬದಲು ಮಾಡಿದರು ನಾನು ನಾನೇ ಅಲ್ಲವೇ?! ಹೆಸರನ್ನು ನಾಲ್ಕು ಜನರ ಸಮ್ಮುಖದಲ್ಲಿ ಖುಷಿಯಾಗಿ ನನ್ನನ್ನು ಗುರುತಿಸಲು ಮಾಡಿಕೊಂಡ ಒಪ್ಪಂದ ಮಾತ್ರವೇ ಹೊರತು ಅದರಲ್ಲಿ ನಾನಂತು ಇಲ್ಲ ಎನ್ನುವುದನ್ನು ನೀವೆಲ್ಲ ಒಪ್ಪುತ್ತೀರಿ ಅಲ್ಲವೇ??!!ನನ್ನ ಹೆಸರಿನ ಅನೇಕ ಜನರಿದ್ದಾರೆ ಹಾಗಾದರೆ ಅವರೆಲ್ಲಾ ನಾನೇನ??
ನನ್ನ ದೇಹಕ್ಕೊಂದು ಆಕಾರವಿದೆ, ಎತ್ತರವಿದೆ, ತೂಕವಿದೆ, ಬಣ್ಣವಿದೆ, ಚಲನೆ ಇದೆ, ಹಾಗೆಂದುಕೊಂಡು, ಆ ದೇಹ ನಾನೇನಾ?? ನಾನು ಹುಟ್ಟಿದಾಗ ಕುಬ್ಜವಾಗಿದ್ದ ದೇಹ ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಲೇ ಇದೆ, ಹಾಗಾದರೆ ನಾನ್ಯಾರು? ನನ್ನ ದೇಹಕ್ಕೆ ರಕ್ತ ಕೊಟ್ಟು, ಉಸಿರು ಕೊಟ್ಟು ಕಾಪಾಡಲು ಹೃದಯವಿದೆ, ಅಂದ ಮಾತ್ರಕ್ಕೆ ನಾನು ಬರಿ ಹೃದಯನಾ? ಹೃದಯದಿಂದ ರಕ್ತ ಹೀರಿ ಜೀವಂತ ಆಗಿರುವ ನನ್ನ ತಲೆಯಲ್ಲಿ ಒಂದು ಮೆದುಳಿದೆ, ಆ ಮೆದುಳು ನಾನೇನಾ? ಇಲ್ಲಿ ಜೀವಂತ ಎನ್ನುವ ಪದವೇ ಒಂದು ಒಗಟು, ಹಾಗಾದರೆ ನಿಜವಾಗಿಯೂ ನಾನ್ಯಾರು, ಇಲ್ಲಿ ಇನ್ನೊದು ಪ್ರಶ್ನೆ, ಈ “ನಿಜ” ಎನ್ನುವುದು, ನನಗೆ ನಿಜವಾಗಿರುವುದೋ? ಅಥವಾ ನನ್ನ ಸುತ್ತಮುತ್ತಲಿನ ನನ್ನ ಹಾಗೆಯೇ ಚಲನೆ ಇರುವವರಿಗೋ? ಅಥವಾ ಇನ್ನ್ಯಾರೋ ಕಣ್ಣಿಗೆ ಕಾಣದವರಿಗೋ? ಚಿಕ್ಕಂದಿನಿಂದಲೂ ನನಗ್ಯಾಕೋ ಎಲ್ಲವು ಅಜಲು ಗೊಜಲು, ಒಮ್ಮೆ ಪರೀಕ್ಷೆಯಲ್ಲಿ ನೂರಕ್ಕೆ ೯೦ ಅಂಕ ತೆಗೆದುಕೊಂಡರೆ ಬೆನ್ನು ತಟ್ಟುವ ಜನ, ಅದೇ ಮುಂದಿನ ಪರೀಕ್ಷೆಯಲ್ಲೂ ೯೦ ಕೊಂಡೆ, ಆಗ ಅದೇ ಜನ ನನ್ನನ್ನು ಕಡೆಗಾಣಿಸಿದರು, ಕಾರಣವೇನು, ಇನ್ನೊಂದು ಚಲನೆಯುಳ್ಳ ದೇಹ ೯೮ ಅಂಕ ಪಡೆದುಕೊಂಡಿತ್ತು!!!!
ಇಲ್ಲಿ ನನ್ನ ಅಂಕಗಳು ಸ್ಥಿರವಾಗಿದ್ದರು, ಅದನ್ನು ನೋಡುವವರ ಮನಸ್ಥಿತಿ ಬದಲಾಗಿ ಹೋಯ್ತು! ಹಾಗೆಂದು ನಾನೂ ಅವರನ್ನು ಒಲಿಸಲು ಪ್ರಯತ್ನಿಸುವುದು ನಿಜವಾದ ನಾನೇ?!!
   ಈ ಮನಸ್ಸು ಅಥವಾ ಮನಸ್ಥಿತಿಯನ್ನು ನಾನು ಎನ್ನೋಣ ಎಂದರೆ, ಅದು ಯಾವಾಗಲು ಬದಲಾಗುತ್ತಲೇ ಇದೆ, ಇಂದು ಕಂಡ ವಿಸ್ಮಯಗಳು ನಾಳೆ ಸಾಮಾನ್ಯ ವಿಷಯವಾಗಿರುತ್ತದೆ, ನಿನ್ನೆ ಕಂಡ ಕನಸುಗಳು ಇಂದು ಮರೆತೇ ಹೋಗಿರುತ್ತವೆ, ಕೊನೆ ಪಕ್ಷ, ಈ ದೇಹ, ಮನಸು, ಹೆಸರು, ಉಸಿರು ಎಲ್ಲವನ್ನು ಕೂಡಿಸಿ ನಾನು ಎನ್ನೋಣ ಎಂದರೆ, ಒಂದು ಇಲ್ಲದೆ ಇನ್ನೊಂದಕ್ಕೆ ಅರ್ಥವೇ ಇಲ್ಲದ ಪರಿಸ್ಥಿತಿ, ಮೊನ್ನೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಕಲೆಕ್ಟರ್ ಎಂದು ಎಲ್ಲರಿಂದ ಕರೆಸಿಕೊಳ್ಳುವ ಜೀವ ಬಂದು, ನಿಮ್ಮ ಐಡಿ ಕಾರ್ಡ್ ಕೊಡಿ ಎಂದು ಕೇಳಿತು, ಎದುರಿಗೆ ಇದ್ದ ನನ್ನ ದೇಹ, ಮನಸು,ಹೆಸರು ಉಸಿರು ಯಾವುದಕ್ಕೂ ಬೆಲೆಯೇ ಇಲ್ಲದಂತೆ ಆ ಜೀವ ನನ್ನ ದೇಹದಲ್ಲಿರುವ ಮುಖದ ಕಡೆಗೂ ನೋಡದೆ, ಐಡಿ ಕಾರ್ಡ್ ನೋಡಿ ಸುಮ್ಮನೆ ಹೋಯಿತು!!ಹಾಗಾದರೆ ಐಡಿ ಕಾರ್ಡೇ ನಾನು ಎನ್ನೋಣವೆಂದರೆ,ಆ ಕಾರ್ಡ್ ಇಲ್ಲದೆಯೂ ನನ್ನ ದೇಹ ಚಲಿಸಲು ಶಕ್ತಿ ಹೊಂದಿತ್ತು, ಇಲ್ಲಿ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ, ನನ್ನವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ, ಅದಕ್ಕೂ ಉತ್ತರ ಸಿಕ್ಕರೆ ನನ್ನದು ಎಂಬ ವಸ್ತು ಇಲ್ಲಿ ಏನಿದೆ ಎಂಬಾ ಪ್ರಶ್ನೆ ಏಳುತ್ತದೆ, ಸುಮ್ಮನೆ ನನ್ನ ತಂದೆ ತಾಯಿಯನ್ನು ನನ್ನವರು ಎಂದುಕೊಳ್ಳೋಣ ಎಂದರೆ, ಈ ದೇಹದ ಬದಲು ಬೇರೆ ಒಂದು ದೇಹ-ಮನಸ್ಸು ಅವರ ಗರ್ಭದಲ್ಲಿ ಜನಿಸಿದ್ದಿದ್ದರೆ, ನನ್ನ ದೇಹಕ್ಕಿದ್ದ ಹೆಸರು ಆ ದೇಹಕ್ಕೆ ಇರುತ್ತಿತ್ತು, ಆಗ ಅವರು ಆ ದೇಹದ ತಂದೆ ತಾಯಿಗಳಾಗಿರುತ್ತಿದ್ದರು, ಆಗ ನಾನು ಎಂದು ಎಲ್ಲರಿಂದ ಗುರುತಿಸಿಕೊಳ್ಳುವ ದೇಹ-ಮನಸೂ ಏನು ಇರುತ್ತಿರಲಿಲ್ಲ!!ನನ್ನ ದೇಹ-ಮನಸು ಇಲ್ಲ ಎಂದ ಮಾತ್ರಕ್ಕೆ ನಾನು ಇಲ್ಲವೇ ಇಲ್ಲ ಎಂದು ಅರ್ಥವೇ?!!
   ಇಲ್ಲಿಯೇ ಇನ್ನೊಂದು ವಿಚಾರ, ದೇಹ ಒಂದು ಶಕ್ತಿ, ಕೆಲವೊಮ್ಮೆ ಒಪ್ಪಲಾಗುವುದಿಲ್ಲ, ಯಾಕೆಂದರೆ ಮನಸ್ಸು ಎನ್ನುವುದು ಇಲ್ಲದೆ ದೇಹಕ್ಕೆ ಬೆಲೆ ಇಲ್ಲ! ಸರಿ, ದೇಹ-ಮನಸು ಎರಡು ಶಕ್ತಿಯ ರೂಪಗಳು, ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತೆಗೆದುಕೊಂಡು ಹೋಗುವಾಗ ಸಂಪೂರ್ಣ ರೂಪಾಂತರ ಅಸಾಧ್ಯ, ಸ್ವಲ್ಪ ಮಟ್ಟದ ಶಕ್ತಿ ಬೇರೆ ಬೇರೆ ರೂಪದಲ್ಲಿ ವ್ಯಯವಾಗಿ ಹೋಗುತ್ತದೆ, ಅದನ್ನು ವಿಜ್ಞಾನ ಸಾಬೀತುಪಡಿಸಿದೆ, ಹಾಗಾದರೆ, ಎಷ್ಟೋ ವರ್ಷಗಳಿಂದ ರೂಪಾಂತರ ಹೊಂದಿ ಹೊಂದಿ ಬರುತ್ತಿರುವ ನಮ್ಮ ದೇಹ-ಮನಸಿನ ಶಕ್ತಿ ಕೂಡ ಒಂದು ದಿನ ನಶಿಸಿ ಹೋಗಿ ಬಿಡಬಹುದಲ್ಲಾ, ಆಗ ಬೇರೆ ರೂಪದಲ್ಲಿ ವ್ಯಯವಾದ ಶಕ್ತಿ ಏನಾಗಿರುತ್ತದೆ ?? ಅಥವಾ ಇಲ್ಲಿ ವಿಜ್ಞಾನ ಎನ್ನುವ ಪದ ಎಲ್ಲವನ್ನು ಸಾಬಿತು ಮಾಡುವ ವರೆಗೂ ಇದ್ದ ಎಲ್ಲ ಶಕ್ತಿಯ ರೂಪಗಳು, ನೈಸರ್ಗಿಕ ಕ್ರಿಯೆಗಳು, ಇದ್ದೆ ಇರಲಿಲ್ಲ ಎನ್ನಲಾಗುತ್ತದೆಯೇ?
    ಭಾಷೆಯ ರೂಪದಲ್ಲಿ, ಅಥವಾ ಭಾಷೆಯ ಮೂಲಕ ಹುಟ್ಟಿದ ದೇಹ ಸುತ್ತಲಿನ ಪ್ರಕೃತಿಯೊಂದಿಗೆ ಒಡನಾಟ ಹೊಂದುತ್ತದೆ ಸತ್ಯವೇ??? ಹಾಗಾದರೆ ಯಾವುದೇ ಬಾಷೆ ಅರಿಯದ ಚಿಕ್ಕ ಮಗುವಿನ ಬಾಯಿಗೆ ಸಕ್ಕರೆ ಹಾಕಿದರೆ ಸುಮ್ಮನೆ ಚೀಪುತ್ತದೆ!! ಅದೇ ಬೇವಿನ ಎಲೆಯನ್ನೋ, ಹಾಗಲಕಾಯಿಯನ್ನೊ ಹಾಕಿದರೆ ಕಿಟಾರನೆ ಕಿರುಚಿ ಬಿಡುತ್ತದೆ!! ನಿಜವಾದ ಇಂದ್ರಿಯ ಚರ್ಮ ಮಾತ್ರ, (ನಾಲಿಗೆಯ ಚರ್ಮ ಕೂಡ ಸೇರಿಸಿಕೊಂಡು) ಎಂದು ಹೇಳಲು ಬರುತ್ತದೆಯೇ?  ಈ ದೇಹ ಹಾಗು ಮನಸ್ಸು?? ಈ ಭೂಮಿಯೆಂಬ ಹೆಸರಿನ ಗೋಲದ ಮೇಲೆ ಎಲ್ಲಿಂದ ಬಂತು, ಎಲ್ಲವು ಪ್ರಶ್ನೆಗಳೇ??
ನಾನು ಬದುಕಿದ್ದರೆ ನನಗೆ ಸಾವಿಲ್ಲ??! ಸಾವಿದ್ದರೆ ಬದುಕು ಬೇಕಂತಲೇ ಇಲ್ಲ!! ದಿನಗಳ ಎಣಿಕೆ! ಬಾಲ್ಯದ ಕನಸು! ಯವ್ವನದ ನೆನಪು!ವೃದ್ದಾಪ್ಯದ ಮೆಲುಕು!ಆಮೇಲೇನು ? ಪ್ರಶ್ನೆಗಳು ಹಾಗೆ ಅಲ್ಲವೇ?? ಕಾಡುತ್ತಲೇ ಇರುತ್ತವೆ!!
ಸಂಜೆ ಆಯಿತು, ಹೊಟ್ಟೆ ತಾಳ ಹಾಕುತಿತ್ತು, ಕುಳಿತಲ್ಲಿಂದ ಎದ್ದು ಬಂದೆ!!
(ಸುಮ್ಮನೆ ತಮಾಷೆಗೆ– ಇಷ್ಟೆಲ್ಲಾ ಆದಮೇಲು ನಮಗೆ ಕಾಡುವ ಪ್ರಶ್ನೆ “ಹೀಗೂ ಉಂಟೇ”?!!ಹ್ಹ ಹ್ಹ )

No comments:

Post a Comment