Saturday 25 February 2017

ಕಿಟಕಿಯಾಚೆ..

    ಎದುರುಗಡೆ ಟೇಬಲ್ ಮೇಲೆ DELL ಲ್ಯಾಪ್ ಟಾಪ್ ಅಗಲವಾಗಿ ಬಾಯಿ ತೆರೆದು ಕುಳಿತಿತ್ತು. ೩೨.೫*೧೯.೫" ಸ್ಕ್ರೀನ್ ನಲ್ಲಿ ಯಾವುದೋ ತೆಲುಗು ಸಾಂಗ್ ಪ್ಲೇ ಅಗ್ತಾ ಇತ್ತು. ಆದರೆ ಅವಳ ದೃಷ್ಟಿ ಕಿಟಕಿಯಿಂದ ಕಾಣುತ್ತಿರುವ ಹೊರಪ್ರಪಂಚದ ಮೇಲಿತ್ತು. ಗಮನವೆಲ್ಲಾ ವಾಹನಗಳ ಓಡಾಟದ ಭರಾಟೆಯಿಂದ ಉಂಟಾಗುತ್ತಿದ್ದ ಕರ್ಕಶ ಶಬ್ದಗಳ ಮೇಲೆ. ತನ್ನ ಮನಸು ಕೂಡ ಕಳೆದ ಹಲವು ತಿಂಗಳುಗಳಿಂದ ಇದೇ ರೀತಿ ಅಶಾಂತತೆಯಿಂದ ತುಂಬಿಹೋಗಿದೆ. ಮನದ ಹೆದ್ದಾರಿಯಲ್ಲಿ ಯಾವಾಗ ನೋಡಿದರೂ ಟ್ರಾಫಿಕ್ ಜಾಮ್. ಒಂದಲ್ಲ ಒಂದು ವಾಹನದಿಂದಾಗಿ ಪ್ರತಿದಿನವೂ ಕರ್ಕಶ ಸೌಂಡುಗಳು ತಪ್ಪಿದ್ದಲ್ಲ. "ಹೇ ದೇವಾ, ಈ ಟ್ರಾಫಿಕ್ ಜಾಮ್ನಿಂದ ನನ್ನ ಮನಸನ್ನು ಹೇಗೆ ಮುಕ್ತಗೊಳಿಸಲಿ?"! ದೊಡ್ಡದಾಗಿ ಒಮ್ಮೆ ನಿಟ್ಟುಸಿರು ಬಿಟ್ಟಳು.
                 ಅವಳಿಗೆ ಯಾವತ್ತೂ ಬಗೆಹರಿಯದ ಸಂಗತಿ ಒಂದಿದೆ. ‘ನಮ್ಮ ಜೀವನ ನಮ್ಮ ಕೈಯ್ಯಲ್ಲಿ’, ‘Life is what you make it’, ‘ನಾವೇ ನಮ್ಮ ಜೀವನವೆಂಬ ನಾಟಕದ ಸೂತ್ರಧಾರರು’ - ಇಂತಹ ಡೈಲಾಗ್ಸ್ ಗಳನ್ನು ಹೇಳುತ್ತಲೂ ಕೂಡ ನಾವೇಕೆ ಸಂಪೂರ್ಣವಾಗಿ ನಮ್ಮದು ಎನ್ನುವ ಏಕ ಮಾತ್ರ ಆಸ್ತಿಯಾದ 'Life'ನ್ನು  ವ್ಯಾಖ್ಯಾನಿಸುವ ಹಕ್ಕನ್ನು ಇನ್ನೊಬ್ಬರಿಗೆ ಬಿಟ್ಟುಕೊಡುತ್ತೇವೆ? ತಿಳಿದೂ ಸಹ ಮಾಡುವ ತಪ್ಪು ಇದೇ ಅಲ್ಲವೇ? ...ಈ ಸಮಯದಲ್ಲಿ ಮೆದುಳು ಎನ್ನುವ ಬುದ್ಧಿಜೀವಿ ಏನು ಮಾಡುತ್ತಿರುತ್ತದೆ...? ನಮ್ಮ ಜೀವನದ remote controller ನು ನಿಯಂತ್ರಿಸಲು ನಾವೇನು ಬೇರೆಯವರಿಗೆ ಕೊಟ್ಟಿದ್ದೇವಾ????
              FB ಓಪನ್ ಮಾಡಿ ಕೂತಾಗಲೆಲ್ಲಾ ಅವಳಿಗೆ ಒಂದು ವಿಷಯ ಮತ್ತೆ ಮತ್ತೆ ನೆನಪಾಗುತ್ತದೆ. ವ್ಯಕ್ತಿಯೊಬ್ಬ ಎಷ್ಟರ ಮಟ್ಟಿಗೆ ಸೋಷಿಯಲ್ ನೆಟ್ ವರ್ಕ್ ಮೇಲೆ ಡಿಪೆಂಡ್ ಆಗಿದ್ದಾನೆಂ(ಳೆಂ)ದರೆ ಎದುರಿಗೆ ಸಿಕ್ಕಿದಾಗ ಅಥವಾ ಕಾಲ್ ಮಾಡಿದಾಗ ಮಾತನಾಡಲು ಸಮಯವಿರುವುದಿಲ್ಲ. ಅದೇ FBಲಿ ಚಾಟ್ ಮಾಡಲು ಅವನಿ(ಳಿ)ಗೆ ಬೇಜಾನ್ ಪುರಸೊತ್ತಿರುತ್ತದೆ. ಜೀವಂತಿಕೆಗಿಂತ ನಿರ್ಜೀವತೆಯತ್ತಲೇ ಮೋಹ ಜಾಸ್ತಿಯಾಗುತ್ತಿದೆ. ಇದನ್ನು ಅವರಿಗೆ ಅರ್ಥ ಮಾಡಿಸುವುದಾದರೂ ಹೇಗೆ? ಯಾಕೆಂದರೆ ಆಮೇಲೆ ಒಂದು ಅಲ್ಟಿಮೇಟ್ ಸ್ಟೇಟ್ಮೆಂಟ್ ನೀಡಬಾರದಲ್ಲ... ‘ನಿನಗೆ ಜಗತ್ತಿನಲ್ಲಿ ಯಾರೂ ಸರಿಯಾಗಿ ಕಾಣಿಸಲ್ಲ’..!
            ನಿಜ, ಜಗತ್ತಿನಲ್ಲಿ ಯಾರೂ ಸರಿಯಲ್ಲ. Nobody/Nothing is perfect. ಈ ನಮ್ಮ ಭೂಮಿಯೇ ಪೂರ್ತಿ ದುಂಡಗಿಲ್ಲ. ಮೇಲ್ಭಾಗದಲ್ಲಿ ಚಪ್ಪಟೆಯಾಗಿದ್ದು ನಡುವೆ ಉಬ್ಬಿದೆ. ಅದೇ ರೀತಿ ಮನುಷ್ಯ ಕೂಡ. ಕೆಲವೊಂದು ಗುಣಗಳು ಚಪ್ಪಟೆಯಾಗಿ ಸೊರಗಿಹೋಗಿದ್ದರೆ, ಇನ್ನು ಕೆಲವು ದೃಢವಾಗಿ ಉಬ್ಬಿಕೊಂಡಿರುತ್ತವೆ. ಇದರ ಅರಿವು ಪ್ರತಿ ಮನುಷ್ಯನಿಗೂ ಇರುತ್ತದೆ. ಆದರೆ ಬೇರೆಯವರು ಹೇಳಿದಾಗ ಮಾತ್ರ ಅರಿವೆಂಬ ಕಿಡಿ ಆರಿಹೋಗಿ ಅವಿವೇಕದ ಬೂದಿ ಆವರಿಸುತ್ತದೆ.
         ಅಲಾರಂ ಗಡಿಯಾರ ಬಾರಿಸಿತು. ಅವಳು ಕಿಟಕಿಯಿಂದ ಇತ್ತ ದೃಷ್ಟಿ ಹರಿಸಿದಳು. ಥತ್, ಏನೇನೋ ಯೋಚನೆ ಮಾಡಿಬಿಟ್ಟೆ. ಒಂದಕ್ಕೊಂದಕ್ಕೂ ಸಂಬಂಧವೇ ಇಲ್ಲದಂತೆ ಎತ್ತೆತ್ತಲೋ ತನ್ನ ಆಲೋಚನಾ ಕುದುರೆ ಓಡಿತಲ್ಲ ಎನಿಸಿತು. ಮನಸ್ಸಿಗೆ ಏನೋ ಸ್ವಲ್ಪ ಸಮಾಧಾನವಾಯಿತು. ಇದನ್ನೆಲ್ಲಾ ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದುಕೊಂಡಳು. ಮರುಕ್ಷಣವೇ ನೆನಪಾಯಿತು, ‘ಜೀವಂತಿಕೆಗಿಂತ ನಿರ್ಜೀವತೆಯತ್ತ ಮೋಹ ಜಾಸ್ತಿ’. ಮುಗುಳ್ನಗುತ್ತಲೇ Statusನಲ್ಲಿ ಹಾಕಿದರಾಯಿತು ಎಂದುಕೊಳ್ಳುತ್ತಾ ಕುರ್ಚಿಯಿಂದ ಮೇಲೆದ್ದಳು. ಲ್ಯಾಪ್ ಟಾಪ್ ನಲ್ಲಿ ಈಗ ಸಾಂಗ್ ಪ್ಲೇ ಆಗುತ್ತಿತ್ತು, ‘ಸಂಚಾರಿ ನೀ’.... :)

No comments:

Post a Comment