Tuesday, 16 December 2014

ಎಂದೂ ಮರೆಯದ ಹಾಡು.....

  ಅದೊಂದು ಮಧ್ಯಾಹ್ನ ಕಣ್ಣಿಗೆ ಬಿದ್ದ ಮುದ್ದಾದ ಹಸು ಮತ್ತು ಕರುವನ್ನು ನೋಡಿದಾಗಿಂದ ಮನಸ್ಸು ಇಂದೆಕೋ ಬಾಲ್ಯದ ದಿನಗಳಿಗೆ ನೆಗೆಯುತ್ತಿದೆ. ಅಂಗನವಾಡಿಯಲ್ಲೋ ಒಂದನೆಯ ತರಗತಿಯ ಪಠ್ಯದಲ್ಲಿ ಇರಬೇಕು  "ಪುಣ್ಯಕೋಟಿ ಗೋವಿನ ಹಾಡು". ಆದರೆ ನಾನು ಮಾತ್ರ ಈ ಹಾಡನ್ನು ಶಾಲೆಗೆ ಸೇರುವ ಮುನ್ನವೇ ಅಪ್ಪನಿಂದ  ಕೇಳಲ್ಪಟ್ಟಿದ್ದೆ. ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು, ಯಾರು ಮರೆತರು ನಾ ಮಾತ್ರ ಮರೆಯದ ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಮಕ್ಕಳು ಓದಲೇಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಭಾವನಾತ್ಮಕ ಪದ್ಯ.
  ಅಪ್ಪ ನಾ ಚಿಕ್ಕವಳಿದ್ದಾಗ ದಿನಾಲೂ ಒಂದೊಂದು ಕಥೆಯನ್ನು ಹೇಳುತ್ತಿದ್ದರು. ಕೆಲ ಸಲ ಇನ್ನೊಂದು ಮತ್ತೊಂದು ಮಗದೊಂದು ಕಥೆ ಹೇಳು ಅಪ್ಪನ ಬಳಿ ಹಠ ಮಾಡುತ್ತಿದ್ದ ನಾನು ಪುಣ್ಯಕೋಟಿಯ ಕಥೆ ಕೇಳಿದ ತಕ್ಷಣ ನನ್ನ ಕಣ್ಣುಗಳಿಂದ ನನಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು, ಕಥೆಯ "ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ" ಸಾಲುಗಳನ್ನು ಕೇಳಿದಾಕ್ಷಣ ದುಃಖ ಉಮ್ಮಳಿಸಿ ಬಂದು ಅಲ್ಲೇ ಅಪ್ಪನ ಹೊಟ್ಟೆಯ ಮೇಲೆ ಅಳುತ್ತ ಬಿಕ್ಕುತ್ತ ನಿದ್ದೆಗೆ ಜಾರುತ್ತಿದ್ದೆ. ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕೇಳಿದಾಗಲೆಲ್ಲ ಅಪ್ಪನ ಹೊಟ್ಟೆಯ ಮೇಲೆ ಆನೆ ಆಡುತ್ತ ಕಥೆ ಕೇಳುತ್ತಿದ್ದ ದಿನಗಳು, ಅಮ್ಮ ನನ್ನನ್ನು ಸಮಾಧಾನಿಸುತ್ತಿದ್ದ ಬಾಲ್ಯದ ಸುಂದರ ಸವಿ ನೆನಪುಗಳು ನೆನಪಾಗಿ, ಕಣ್ಣೀರು ತರಿಸುವ ಈ ಪದ್ಯ ಎಷ್ಟೊಂದು ಸುಂದರವಾಗಿದೆ. ನನ್ನ ಪ್ರಕಾರ ಮಾನವೀಯ ಮೌಲ್ಯಗಳ ಕಲಿಕೆಗೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಈ ಪುಣ್ಯಕೋಟಿ ಗೋವಿನ ಹಾಡು.
  ಮತ್ತೊಮ್ಮೆ ಅಪ್ಪನಿಗಾಗಿ, ಅಮ್ಮನಿಗಾಗಿ, ನನಗಾಗಿ ಮತ್ತು ಈ ಬ್ಲಾಗ್ ಬರಹ ಓದುತ್ತಿರುವ ಎಲ್ಲರಿಗಾಗಿ ಪುಣ್ಯಕೋಟಿ ಗೋವಿನ ಹಾಡಿನ ಸಾಲುಗಳು :

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು

ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.

ಪುಣ್ಯಕೋಟಿಯ ಹಾಡು ವೀಕ್ಷಿಸಲು ಯೂಟ್ಯೂಬ್ ಲಿಂಕ್:
http://youtu.be/UOZNmoWirK4

No comments:

Post a Comment