Thursday, 7 March 2019

ಸಂತ ಶಿಶುನಾಳ ಶರೀಫ

ಮಾರ್ಚ್ 7 ಭಾವೈಕ್ಯಕೆಯ ಹರಿಕಾರ ಸಂತ ಶಿಶುನಾಳ ಶರೀಫರ ಜನ್ಮದಿನ.
ಶಿಶುನಾಳ ಶರೀಫರು ಕರ್ನಾಟಕದ ಕಬೀರ್ ದಾಸ್ ಎಂದೇ ಪ್ರಸಿದ್ಧರಾಗಿದ್ದು ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ (ಶಿಶುನಾಳ) ಶಿಶುವಿನಹಾಳ ಎಂಬ ಚಿಕ್ಕ ಗ್ರಾಮ.
ಅಲ್ಲಿಯೇ ಕನ್ನಡ ಮತ್ತು ಉರ್ದು ಶಿಕ್ಷಣ ಪಡೆದು
ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವಾಗ ನಾನೇನು ಮಾಡುತ್ತಿದ್ದೇನೆ? ಬೇರೆಯವರಿಗೆ ಕಲಿಸುವ ಅರ್ಹತೆ ನನಗಿದೆಯೇ? ಎಂಬ ಪ್ರಶ್ನೆಗಳು ಅವರಿಗೆ ಕಾಡತೊಡಗಿದಾಗ ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟು ತಮಗೆ ಸೂಕ್ತವಾದ ಗುರುವಿನ ಹುಡುಕಾಟಕ್ಕೆ ಅಲೆದಾಡುತ್ತಿರುವಾಗ ಕೊನೆಗೆ ಗುರು ಗೋವಿಂದ ಭಟ್ಟರನ್ನು ಭೇಟಿಯಾಗಿ ಅವರನ್ನು ತಮ್ಮ ಗುರುವೆಂದು ಸ್ವೀಕರಿಸುತ್ತಾರೆ. ದೇವಿಯ ಆರಾಧಕರಾಗಿದ್ದ ಗೋವಿಂದ ಭಟ್ಟರು ಬ್ರಾಹ್ಮಣರಾಗಿದ್ದರೂ ಸಂಪ್ರದಾಯ, ಮೂಢನಂಬಿಕೆಗಳ ಎಲ್ಲೆಯನ್ನು ಮೀರಿ ನಿಂತಿದ್ದರು. ಗುರುವಿನ ಒಡನಾಟದಿಂದ ತಮ್ಮ ಅರಿವಿನ ಬಾಗಿಲು ತೆರೆದಾಗ ಶರೀಫರು ಗುರುವಿನೊಡನೆ ಚರ್ಚೆ, ಮಾತು, ಕಲಿಕೆಯಲ್ಲೇ ಹೆಚ್ಚಿನ ಸಮಯ ಕಳೆಯಲಾರಂಭಿಸಿ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿಬಿಟ್ಟರು. ಆಗ ಊರಿನ ಜನ ಶರೀಫರ ಕುಟುಂಬದವರಿಗೆ "ಆ ಜನಿವಾರದವನ ಜೊತೆ ಶರೀಫನಿಗೇನು ಕೆಲಸ?" ಎಂಬೆಲ್ಲ ಪ್ರಶ್ನೆಗಳನ್ನು ಕೇಳತೊಡಗಿದಾಗ ಹೀಗೆ ಬಿಟ್ಟರೆ ಶರೀಫ ಕೈ ತಪ್ಪಿ ಹೋಗುತ್ತಾನೆಂಬ ಭಯದಿಂದ ಶರೀಫರ ಮನವೊಲಿಸಿ ಫಾತಿಮಾ ಎಂಬ ಹೆಣ್ಣುಮಗಳ ಜೊತೆ ಶರೀಫರ ಮದುವೆ ಮಾಡಿದರು.
ಶರೀಫರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಹೆಂಡತಿಯನ್ನು ತುಂಬಾ ಪ್ರೀತಿಸತೊಡಗಿದರು. ಹೆಂಡತಿಯ ಒಡನಾಟದಲ್ಲಿ ಶರೀಫರು ಬೆಟ್ಟದಷ್ಟು ಜ್ಞಾನ, ಪ್ರೀತಿಯನ್ನು ಪಡೆದರು. ಮೊದಲ ಹೆರಿಗೆಯಲ್ಲಿ ಶರೀಫರ ಮಡದಿ, ಮಗು ಇಹಲೋಕ ತ್ಯಜಿಸಿದಾಗ ಶರೀಫರಿಗೆ ಜೀವನದ ಮೇಲೆ ತುಂಬಾ ಬೇಸರವಾದರೂ, ದುಃಖಿಸುತ್ತ ಕೂರದೆ


ದೇವರಲ್ಲಿ ನಂಬಿಕೆಯಿಟ್ಟು ಗುರು ಗೋವಿಂದರೊಡಗೂಡಿ ಮಂದಿರ-ಮಸೀದಿ ಅಲೆಯುತ್ತ ಜ್ಞಾನದ ಸಾಗರವನ್ನೇ ಹರಿಸಿ ಈ ಇಬ್ಬರು ದೈವೀ ಪುರುಷರು ಅನೇಕ ಪವಾಡಗಳನ್ನು ಮಾಡಿದ್ದಾರೆ.
ಶರೀಫರು ತಮ್ಮ ಜೀವನವನ್ನೇ ಪಾರಮಾರ್ಥದ ಸಾಧನೆಗೆ ಮೀಸಲಿಟ್ಟು ಅನೇಕ ತತ್ವಪದಗಳನ್ನು ರಚಿಸಿದ್ದಾರೆ.
ಅವರ ಪದಗಳು ಆಡು ಭಾಷೆಯಲ್ಲಿದ್ದು ಜನಸಾಮಾನ್ಯರ ಮನಕ್ಕೆ ಮುಟ್ಟುವಂತಹವಾಗಿವೆ. ತುಂಬಾ ಗಹನವಾದ ಅಧ್ಯಾತ್ಮ ವಿಚಾರಧಾರೆಗಳನ್ನು ಅವರ ಪದಗಳಲ್ಲಿ ಕಾಣಬಹುದು. ಗುರು ಗೋವಿಂದ ಭಟ್ಟರಷ್ಟೇ ಅಲ್ಲದೇ
ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ, ಅಡವಿ ಸ್ವಾಮಿ, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳೂ ಶರೀಫರ ಮೇಲೆ ಪ್ರಭಾವ ಬೀರಿದ ಮಹಾನ್ ಪುರುಷರು. ಉರ್ದು ಮಿಶ್ರಿತ ಕನ್ನಡದ ಆಡು ಭಾಷೆಯಲ್ಲಿನ ಶರೀಫರ ತತ್ವಪದಗಳು ಒಗಟಿನ ರೂಪದಲ್ಲಿದ್ದು ಅದರಲ್ಲಿನ ಸಾರವನ್ನು ಅರಿಯುವುದೇ ಒಂದು ಕಲಿಕೆಯಾಗಿದೆ. ಶರೀಫರು ಸುಮಾರು 400 ಪದಗಳನ್ನು ರಚಿಸಿದ್ದು ಅವುಗಳಲ್ಲಿ ಸಾಕಷ್ಟು ಪದಗಳು ಹಾಡುಗಳ ರೂಪದಲ್ಲಿ ಪ್ರಸಿದ್ದಿ ಹೊಂದಿವೆ. ಹೆಸರಾಂತ ಗಾಯಕ ಸಿ.ಅಶ್ವಥ್ ಮತ್ತು ಮೊದಲಾದವರ ಧ್ವನಿಯಲ್ಲಿ ಶರೀಫರ ಹಾಡುಗಳು ಕನ್ನಡ ಸಂಗೀತ ಲೋಕದಲ್ಲಿ ಜನಪದ ಅಲೆಯನ್ನೇ ಮೂಡಿಸಿವೆ.
ಶರೀಫರ ಕಾಲಾನಂತರ ಅವರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ,ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ನಂತರ ದೊಡ್ಡ ಗದ್ದುಗೆಯನ್ನೇ ನಿರ್ಮಿಸಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ನಾಂದಿ ಹಾಡಿದರು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಆ ಕಟ್ಟೆಯ ಮೇಲೆ ಗುರು ಗೋವಿಂದ- ಶರೀಫರ ಮೂರ್ತಿಗಳು ಮತ್ತು ನೆರಳು ನೀಡುವ ಬೃಹತ್ ಮರ. ಈ ಮರವು ತುಂಬಾ ವಿಶಿಷ್ಟವಾಗಿದ್ದ ಬೇವಿನ ಮರವಾಗಿದ್ದು ಇದರಲ್ಲಿ ಮಲ್ಲಿಗೆಯ ಬಳ್ಳಿಯೂ ಹಬ್ಬಿಕೊಂಡಿದೆ. ಗದ್ದುಗೆಗೆ ಹಿಂದೂ-ಮುಸಲ್ಮಾನ ಎರಡೂ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.ಈ ಗದ್ದುಗೆ ಎಲ್ಲ ಜಾತಿ, ಮತ, ಧರ್ಮಗಳ ಎಲ್ಲೇ ಮೀರಿ ತುಂಬಾ ಭಕ್ತಿ ಭಾವಗಳಿಂದ ಪೂಜಿಸಲ್ಪಡುತ್ತಿದೆ. ಇಂದಿಗೂ ಕೂಡ ಶರೀಫರ ದೇವಕಾರ ಮನೆತನದವರು ಇಲ್ಲಿ ಪೂಜೆ ಮಾಡುತ್ತಾರೆ. 

Friday, 14 December 2018

ಗೀಚಿದ್ದು ತುಂಬಾ years ago..

FBಲೀ  ತುಂಬಾ Years Ago ಗೀಚಿದ್ದು :

 ಶಾಪಿಂಗ್ ಮುಗಿಸಿ ಮನೆಗೆ ಬರುವಾಗ ಅಚಾನಕ್ ಆಗಿ ಅಣ್ಣ-ಅತ್ತಿಗೆ ಸಿಕ್ರು. . ತುಂಬಾ ದಿನಗಳ ನಂತರ ಭೇಟಿಯಾಗಿದ್ದರಿಂದ ಬೇಡ ಬೇಡ ಅಂದ್ರು ಒತ್ತಾಯಿಸಿ ಮನೆಗೆ ಕರೆದುಕೊಂಡು ಹೋದರು. . ನಮ್ಮೆಲ್ಲರ ಹಾಳು ಹರಟೆ ತರಲೆ ಕಿಟಲೇ ಆದಮೇಲೆ ಅತ್ತಿಗೆ ನನ್ನ favourite dishes cook ಮಾಡಿದ್ರು, ಹೇಗೂ ನನ್ ಕಾಲೇಜಿನ vacation holidays ಇರೊದ್ರಿಂದ ನಾನು ಸಖತ್ ಆಗಿ ಊಟ ಮಾಡಿ ನನ್ನ ಮನೆಗೆ ಹೊರಡಲು ready ಆದೆ ಸಮಯ ಹತ್ತಾಗಿತ್ತು, ಹೊತ್ತಾಗಿದೆ ನಾಳೆ ಹೋಗು ಅಂದ್ರು ಕೇಳಲಿಲ್ಲ, ಹಟ ಮಾಡಿ ಮನೆ ಮನೆಗೆ ಹೊರಟೆ ಅರ್ಧ ದಾರಿ ತಲುಪಿದ್ದೆ ಎಲ್ಲಿತ್ತೋ ಏನೊ ಮಳೆ ಧೋ ಅಂತ ಶುರುವಾಗೇ ಬಿಟ್ಟಿತು. .
ಸಿಕ್ಕಿದ್ದೇ chance ಅಂತ ಮಳೆಲಿ ನೆನಕೊಂಡು ಮನೆಗೆ ಬಂದೆ :) , ಅಮ್ಮ ಮಳೇಲಿ ಯಾಕೆ ಬಂದೆ ಅಂತ ಬೈದ್ರು, ಸುಮ್ಮನೆ ಬೈಗುಳಾನೇ ಜೋಗುಳ ಅಂದುಕೊಂಡು ಮಲಗಿದೆ..! ಬೆಳಿಗ್ಗೆ ಕಣ್ಣು ಬಿಟ್ಟಾಗ ಸಮಯ ಬರೋಬ್ಬರಿ ಒಂಬತ್ತು ವರೆ!!!
ದಿನಾ ಬೆಳಿಗ್ಗೆ ಕೌಶಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ,  ರಾಮ ನಾಮ, ಹರಿ ನಾಮ, ದೇವಿ ಸ್ತುತಿ ಇನ್ನೂ ಏನೇನೋ ದೇವರ ನಾಮಗಳಿಂದ ಶುರುವಾಗೋ ದಿನ ಇವತ್ತು ನನ್ನ ನಾಮಾವಳಿ ಮನೇಲಿ..! ;)
ಹೆಣ್ಣು ಮಕ್ಕಳು ಬೇಗ ಎದ್ದೇಳಬೇಕು, ರಜೆ ಸಿಕ್ರೇ ನಂಗೆ ಸಜೆ, ತುಂಬಾ ಆಲಸಿ ನೀನು ಅಂತ ಅಮ್ಮ ಬೆಳಗಿನಿಂದ ಬೈತಾನೇ ಇದ್ದಾರೆ, ನಾನ್ ಯಾವಾಗ ದೇವರನ್ನೇ replace ಮಾಡಿದೆ ಇದು ನನ್ನ ಹೆಸರಿನ effect ಇರಬಹುದು ಹೆಸರಿನಲ್ಲೇನಿದೆ ಅಂತ ಕೇಳ್ತಿದ್ದ ನಂಗೆ ಒಳ್ಳೆ ಉತ್ತರ ಸಿಕ್ತು ಅಂದುಕೊಂಡು hot coffee ಜೊತೆ newspaper ಓದುತ್ತಿರುವಾಗ ಶುರುವಾಯ್ತು ನೋಡಿ morning pings. .hi, hello good morning, coffee?tea? Tiffin? ಅಂತ ಆ ಕಡೆಯಿಂದ friends ಕುಶಲೋಪರಿ enquiry. .
ನನ್ನ ಸುಪ್ರಭಾತ ಕತೆ ಕೇಳಿ ನನ್ನ ಒಬ್ಬಳು ತುಂಬಾ ಆತ್ಮೀಯ one among my sisters ತರಹ ಇರೋ friend ಮೇಘಾ ನಿಂತಳು ಅಮ್ಮಂಗೆ supportive  ಆಗಿ ನಂಗೆ oppose ಮಾಡ್ತಾ ಒಂದು ದೊಡ್ಡ lecture ಕೊಟ್ಟು you are not a baby still c'mon be responsible learn house hold works, mom will not come to your hubby home to help you out all the time, to serve till your table ಈಗಾಗಲೇ ಕಲಿಲಿಲ್ಲಾ ಅಂದರೆ ಇನ್ ಯಾವಾಗ ಕಲಿತಿ ಅಂತ ನನ್ನ vacation holidaysನಾ working days ಆಗಿ convert ಮಾಡಿ take care ಅಂತ ಹೇಳಿ ಹೋದಳು.!
ನಾನೋ easy taking bubbly natured cool minded girl ಯಾರ ಬುದ್ದಿವಾದವನ್ನು ತಪ್ಪಾಗಿ ಪರಿಗಣಿಸದ life is all about learning ಅಂದುಕೊಂಡಿರೊ ಭಾವನಾತ್ಮಕ ಜೀವಿ, ಅಮ್ಮನನ್ನು ರಮಿಸಿ ನಮಿಸಿ ಕೈಲಾದಷ್ಟು ಅವಳಿಗೆ  ಸಹಾಯ ಮಾಡಿ, ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ಗುನುಗುತ್ತಾ, ಕಳೆದೆರಡು ತಿಂಗಳ ಹಿಂದೆ ಅರ್ಧಕ್ಕೆ ಓದಲು ನಿಲ್ಲಿಸಿದ The Epigenetics Revolution ಪುಸ್ತಕವನ್ನು ಕೈಗೆತ್ತಿಕೊಂಡೆ..

ಅಂದು ಸುಮ್ನೆ ತೋಚಿದ್ದು ಹಾಗೆ ಗೀಚಿದ್ದು.....
-Archiees after a long time :)

Saturday, 17 March 2018

ತಪ್ಪುಗಳನ್ನು ಹುಡುಕುವುದರಿಂದ ಸಂತಸವು ಹೆಚ್ಚಾಗುತ್ತದೆ!!

ಕೆಲ ಸಲ ನಾವೆಲ್ಲ ಯೋಚಿಸುತ್ತಿರುತ್ತೇವೆ
ಈ ಜಗತ್ತಿನಲ್ಲಿ ತಪ್ಪುಗಳನ್ನು ಹುಡುಕುವುದರಿಂದ ಹೇಗೆ ಸಂತಸವು ಹೆಚ್ಚಾಗುತ್ತದೆ ಎಂದು??
ಇದನ್ನು ಸ್ಪಷ್ಟಿಕರಿಸಿಕೊಳ್ಳಲು ಈಗ ನಿಮ್ಮ ಪ್ರೀತಿ ಪಾತ್ರರೊಡನೆ ತೀರಾ ಇತ್ತೀಚೆಗೆ ನೀವು ಮುನಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಿ.
ತಪ್ಪು ಎಲ್ಲರಿಂದಲೂ ಆಗುತ್ತವೆ. ತಪ್ಪುಗಳಿಂದಲೇ ತಾನೇ ನಾವು ಪಾಠ ಕಲಿಯುವುದು?!
ಆ ಮುನಿಸಿನ ಸನ್ನಿವೇಶದಲ್ಲಿ ನಿಮ್ಮಿಂದಾದ ತಪ್ಪಾದ ವರ್ತನೆಯನ್ನು ನೀವೇ ಯೋಚಿಸಿ ಹುಡುಕಿ. ಆಗ ನಿಮಗರಿವಾಗುತ್ತದೆ ನೀವೇ ಎನೋ ತಪ್ಪಾಗಿ ಇಲ್ಲವೇ ಒರಟಾಗಿ, ಅಸಂಬದ್ಧವಾಗಿ ಮಾತನಾಡಿರಬಹುದೆಂದು.
ನೀವು ಇದರ ಬಗ್ಗೆ ಯೋಚಿಸಬಲ್ಲರಾದರೆ ತುಂಬಾ ಒಳ್ಳೆಯದು.
ಎಲ್ಲರ ತಲೆಯಲ್ಲಿ ಇಬ್ಬರು ವಕೀಲರಿದ್ದಾರೆ. ಆ ಇಬ್ಬರೂ ವಕೀಲರು ನಮಗಾಗಿ ತಮ್ಮ ವಾದವನ್ನು ಮಂಡಿಸುತ್ತಲೇ ಇರುತ್ತಾರೆ. ಸಮಾಧಾನದಿಂದ ಆ ವಾದವನ್ನು ಕೇಳಿದರೆ ಒಬ್ಬ ವಕೀಲ ನೀವು ಸರಿ ಎಂದು ವಾದ ಮಾಡಿದರೆ ಇನ್ನೊಬ್ಬ ವಕೀಲ ನೀವು ತಪ್ಪೆಂದು ವಾದ ಮಾಡುತ್ತಿರುತ್ತಾನೆ.
ಈಗ ನೀವು ಏರಡನೇ ವಕೀಲನ ವಾದಕ್ಕೆ ಹೆಚ್ಚಿನ ಗಮನ ನೀಡಿ ನಿಮ್ಮಿಂದಾದ ಯಾವುದಾದರೂ ತಪ್ಪನ್ನು ಒಪ್ಪಿಕೊಂಡಾಗ ಆ ಕ್ಷಣದಲ್ಲಿ ನಿಮ್ಮ ಮನಸಿಗೆ ನೋವಾಗಬಹುದು ಆದರೆ ಆ ಎರಡನೇ ವಕೀಲನನ್ನು ಆತನ ವಾದ ಮುಂದುವರೆಸಲು ಬಿಟ್ಟಾಗ ಆತ ನಿಮ್ಮಿಂದಾದ ಎಲ್ಲ ತಪ್ಪುಗಳ ಸತ್ಯಾಂಶಗಳನ್ನು ನಿಮ್ಮ ಮುಂದೆ ಹಾಜರು ಪಡಿಸುತ್ತಾನೆ. ಆಗ ನಿಮಗೆ ನಿಮ್ಮಿಂದಾದ ತಪ್ಪಿನ ಅರಿವಾದಾಗ ಮೊದಲು ನಿಮ್ಮ ಮನಸಿಗೆ ನೋವಾಗುತ್ತದಾದರೂ ನೀವು ನಿಮ್ಮ ಮನಸಿನಾಳದಲ್ಲೆಲ್ಲೋ ನಿಮಗೆ ಗೊತ್ತಿಲ್ಲದೇ ಖುಷಿಯ ಹೆಮ್ಮೆಯ ಭಾವ ಮೂಡುತ್ತದೆ. ಏಕೆಂದರೆ ನಿಮಗೆ ನಿಮ್ಮಿಂದಾದ ನಿಮ್ಮದೇ ವರ್ತನೆಯ ಅರಿವಾಗಿರುತ್ತದೆ.
ವಾವ್ ಎಷ್ಟೊಂದು ಸರಳ ಮತ್ತು ಖುಷಿಯ ವಿಚಾರವಲ್ಲವೇ?
ನಮ್ಮ ತಪ್ಪಿನ ಅರಿವು ನಮಗಾದಾಗ ನಾವು ಅದನ್ನು ಒಪ್ಪಿಕೊಳ್ಳುವುದನ್ನು ಕಲಿತರೆ, ಖುಷಿಯು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ.
ನಾವೆಲ್ಲ ಇದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮಲ್ಲಿ ಬದಲಾವಣೆಯ ಪರ್ವ ಕಂಡುಬರುತ್ತದೆ..

Friday, 16 March 2018

"ಇಂದು" ಎಂಬ ಸುಂದರ ಸುದಿನ🙂

ನಿನ್ನೆಗಳ ಯಾರೂ ಹೊತ್ತು ತರಲು ಸಾಧ್ಯವಿಲ್ಲ,
ನಾಳೆಗಳು ಯಾರಿಗೂ ತಿಳಿದಿಲ್ಲ.. ಆದರೆ  "ಇಂದು" ಎಂಬ ಸುಂದರ ಸುದಿನ ನಮ್ಮೊಂದಿಗಿದೆ.
ಈ ಕ್ಷಣ ಎಂಬುದು ಬದುಕಿನ  ಸಮಯದ ಬಹು ಮುಖ್ಯ ಮತ್ತು ವಾಸ್ತವಿಕ ಪಾತ್ರ. ಜೀವನದ ಪ್ರತೀ ಕ್ಷಣವನ್ನು ಪ್ರೀತಿಯಿಂದ ಸ್ವಾಗತಿಸಿದರೆ ಬದುಕೇ ಪ್ರೀತಿಯ ಹೊಳೆಯಾಗಿ ಹರಿಯುತ್ತದೆ..❤️

Tuesday, 9 May 2017

ಗುರುಪೌರ್ಣಮಿ

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ….

ತಾಯಿ ನಮ್ಮ ಮೊತ್ತ ಮೊದಲ ಗುರು.
ತಂದೆ ಅನಂತರದ ಗುರು.
ಶಾಲಾ ಕಾಲೇಜಿನ ಅಧ್ಯಾಪಕರು ನಂತರದ ಗುರುಗಳು.

ಜೀವನದಲ್ಲಿ ಯಾವುದೇ ಕಡೆಯಿಂದ ಲಭಿಸುವ ಜ್ಞಾನ ಮತ್ತು ಅನುಭವವೂ ಗುರುವಾಗಿದೆ.

ವಿಧಿಯಾಟದಿಂದ ನಮ್ಮನ್ನು ಪರೀಕ್ಷಿಸುವ ಸರ್ವಶಕ್ತ ಮತ್ತು ಅವನಿಂದ ಲಭಿಸುವ ಪಾಠವೂ ಗುರುವೇ ಆಗಿದೆ.

ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ನಡೆಸುವ ವಿವೇಕ, ಜ್ಞಾನ ಮತ್ತು ಶಕ್ತಿಯ ಸಂಯುಕ್ತ ಸಂಕೇತವೇ "ಗುರು"

ನಮ್ಮಲ್ಲಿನ ಅಜ್ಞಾನವನ್ನು ತೊಲಗಿಸಿ ಜ್ಞಾನದೀಪವನ್ನು ಯಾರು ಬೆಳಗಿಸುವರೋ ಅವರೇ ನಿಜವಾದ ಗುರುಗಳು..

ಬದುಕೆಂಬ ಪಾಠಶಾಲೆಗೆ, ಬದುಕಿನ ಪಾಠ ಕಲಿಸಿದ ಎಲ್ಲಾ ಗುರುಗಳಿಗೆ ಭಕ್ತಿಪೂರ್ವಕ ನಮನ.🙏

🌸ಎಲ್ಲರಿಗೂ ಒಳಿತಾಗಲಿ..ಎಲ್ಲರಿಗೂ ಶುಭವಾಗಲಿ..🙏

ಗುರುಪೌರ್ಣಮಿಯ ಶುಭಾಶಯಗಳು✨

Monday, 20 March 2017

‪ಒಂದು ಸುಂದರ ಸಂಜೆ

 ನಾವು ಎಷ್ಟೇ ಕಲಿತು graduates, post graduates, doctorates, many more ಆಗಿದ್ರೂ, ಪ್ರಕೃತಿ, ಸೂರ್ಯ, ಚಂದ್ರ, ಚುಕ್ಕಿ, ತಾರೆ, ನಭೋಮಂಡಲ ಮುಂತಾದವುಗಳ ಕುರಿತು ಸಾಕಷ್ಟು ಮಾಹಿತಿ ದೊರೆತಿದ್ದರೂ, ಸೂರ್ಯ-ಚಂದ್ರ ಇದ್ದಲ್ಲೇ ಇರ್ತಾರೆ, ಭೂಮಿ ತಿರುಗುತ್ತದೆ, day and night occurs due to the rotation of earth on its axis..ಅನ್ನೋ fact ಗೊತ್ತಿದ್ರೂ ಅದೇಕೋ ಏನೋ ಗೊತ್ತಿಲ್ಲ ನನಗೆ sunrise sunset ನೋಡಿದಾಗಲೆಲ್ಲ ಮತ್ತು shifts ಮೇಲೆ work ಮಾಡೋ techies ನೋಡಿದಾಗಲೆಲ್ಲ "ನನ್ನ ಅಮ್ಮ" ನೆನಪಾಗ್ತಾಳೆ. .
ಚಿಕ್ಕಂದಿನಲ್ಲಿ ಅಮ್ಮ ನನಗೆ ಊಟ ಮಾಡಿಸ್ತಿರೋವಾಗ ಅಮ್ಮ ಸೂರ್ಯ ಸಂಜೆಯಾದ ಮೇಲೆ ಎಲ್ಲಿ ಹೋಗ್ತಾನೆ ಅಂತ ಕೇಳಿದಾಗ, ಸೂರ್ಯ-ಚಂದ್ರ ಭೂಮಿ ತಾಯಿಯ ಎರಡು ಮಕ್ಕಳು..ಸಂಜೆಯಾದ ಮೇಲೆ ಸೂರ್ಯ ಅಮ್ಮನ ಹತ್ತಿರ ಹೋಗ್ತಾನೆ ಊಟ ಮಾಡಿ rest ಮಾಡಿ ಬೆಳಿಗ್ಗೆ ಬರ್ತಾನೆ ಅಲ್ಲಿವರೆಗೂ ಚಂದ್ರ ಭೂಮಿ ಕಾಯ್ತಾನೆ. .ಮತ್ತೇ ಬೆಳಿಗ್ಗೆ ಸೂರ್ಯನ ಪಾಳಿ. . ಅಮ್ಮ ಹೇಳಿದ ಆ ಕತೆ ಎಷ್ಟೊಂದು ಸುಂದರ. .  ಸೂರ್ಯಾಸ್ತ-ಸೂರ್ಯೋದಯ ನೋಡೋದಂದ್ರೆ ನಂಗೆ ಪಂಚಪ್ರಾಣ, ತುಂಬಾ ಖುಷಿ.. ಆ ವೇಳೆ ಬಾನಲ್ಲಿ ಮೂಡಿದ ಚಿತ್ತಾರ ನೋಡಿದಾಗಲೆಲ್ಲ ಅಮ್ಮ ಮತ್ತು ಅಮ್ಮ ಹೇಳಿದ ಆ ಕತೆ ನನ್ನೆದೆಲಿ ಬೆಚ್ಚನೆಯ ಅನುಭವ ನೀಡುತ್ತದೆ. .
love u lots ಅಮ್ಮ

Sunday, 5 March 2017

ಹೀಗೂ ಉಂಟೇ??!!

ಜೀವನದಲ್ಲಿ ಒಂದು ರೋಚಕ ಅನುಭವ,ಒಂದೆಡೆ ಯೋಚನೆ/ಆಲೋಚನೆ /ಆತಂಕ, ಮತ್ತೊಂದೆಡೆ ಜೀವನದಲ್ಲಿ ಮಹತ್ತರ ಏನೋ ಸಾಧನೆ ಮಾಡಿದ ಖುಷಿ/ಹೇಳಲಾಗದ/ಮರೆಯಲಾಗದ ಅದ್ಭುತ ಅನುಭವ! ಅನುಭವಿಸಿದವರಿಗೇ ಗೊತ್ತು.....!
  ನಾನು ಇಂದು ಸುಮ್ಮನೆ ನನ್ನ ರೂಮಿನ ಪಕ್ಕದಲ್ಲಿ ಕುಳಿತು, ಅನತಿ ದೂರದಲ್ಲಿ ಕಾಣುವ ಬೆಟ್ಟವನ್ನು ನೋಡುತ್ತಾ ಕೆಲಸಕ್ಕೆ ಬಾರದ ಆಲೋಚನೆಗಳನ್ನು ಮಾಡುತ್ತಿದ್ದೆ, ಸುಮ್ಮನೆ ಎಲ್ಲಿಂದಲೋ ಹಾರಿ ಬಂತೊಂದು ಹಕ್ಕಿ, ಹಕ್ಕಿ ಹಾರಿ ಬಂದು ನನ್ನ ಎದುರಲ್ಲಿ ಕುಳಿತದ್ದಕ್ಕಾಗಿ ಮಾತ್ರ ಆ ಹಕ್ಕಿಯ ಇರುವಿಕೆ ನನಗೆ ತಿಳಿಯಿತಲ್ಲವೇ??! ಹಾಗಾದರೆ ಪ್ರಪಂಚದ ಅಷ್ಟು ಹಕ್ಕಿಗಳು ನನಗೆ ಕಾಣಲು ಸಾದ್ಯವೇ?? ಖಂಡಿತ ಸಾದ್ಯವಿಲ್ಲ! ಅಂದ ಮಾತ್ರಕ್ಕೆ ಆ ಹಕ್ಕಿಗಳೇ ಇಲ್ಲ ಎನ್ನುವುದು ತಪ್ಪಲ್ಲವೆ??!
ಇದೇ ತರ್ಕವನ್ನು ಕಾಲೇಜಿನ ಪರೀಕ್ಷೆಗೆ ಹೋಲಿಸಿ ನೋಡಿದರೆ, ನಾನು ಬರೆದಷ್ಟು ಮಾತ್ರ, ಕರೆಕ್ಷನ್ ಮಾಡುವವರಿಗೆ ಕಾಣಿಸುತ್ತದೆ! ಹಾಗಾದರೆ ಬರೆಯದೆ ಇರುವುದು ನನಗೆ ಗೊತ್ತಿಲ್ಲ ಎಂದು ಅರ್ಥವೇ?!
ಬಹುಷಃ ಗೊತ್ತಿದ್ದರು ನೆನಪಿಲ್ಲದಿರಬಹುದು ಅಲ್ಲವೇ?! ಇದೆಲ್ಲ ಬರಿಯ ಆಲೋಚನೆಗಳು ಅಷ್ಟೇ, ಎಷ್ಟೋ ಬಾರಿ ನಾವು ಬೇರೆಯವರ ಮೌನವನ್ನು ನೋಡಿ ಅವರಿಗೆ ಏನು ಗೊತ್ತಿಲ್ಲ ಎಂದು ತಿಳಿದು ಸುಮ್ಮನಾಗಿರುತ್ತೇವೆ, ಆದರೆ ಗೊತ್ತಿರುವವರೆಲ್ಲರು ಪ್ರಚುರ ಪಡಿಸಬೇಕೆಂದೇನು ಇಲ್ಲ, ಬರೆದವನು ಮಾತ್ರ ಕವಿ ಅಲ್ಲ, ಎಷ್ಟೋ ಬಾರಿ ಬರೆಯದೆ ಸುಮ್ಮನೆ ಕುಳಿತವನು ಕೂಡ ಕವಿಯೇ, ಈ ರೀತಿಯ ಆಲೋಚನೆಗಳು ತಲೆಯಲ್ಲಿ ಓಡಾಡುತ್ತಲೇ ಇತ್ತು, ಆದರೆ ಪರ್ವತ ಮಾತ್ರ ಹಾಗೆ ನಿಂತಿತ್ತು, ಅದನ್ನು ನಾವು ಪರ್ವತ ಎಂದು ಯಾಕೆ ಕರೆಯಬೇಕು ನದಿ ಎಂದು ಕರೆದರೆ ತಪ್ಪೇ?? ಎಂತಾ ಹುಚ್ಚು ಪ್ರಶ್ನೆ ಅಲ್ಲವೇ?! ಪ್ರಪಂಚದ ಎಲ್ಲಾ ಜಡ,ಜೀವಂತ ವಸ್ತುಗಳನ್ನು ನಾವು ಭಾಷೆ ಹಾಗೂ ಅಕ್ಷರಗಳಲ್ಲಿ ಕಟ್ಟಿ ಹಾಕಿದ್ದೇವೆಲ್ಲ? ಪರ್ವತವನ್ನು ನದಿ ಎಂದು ಕರೆದ ಮಾತ್ರಕ್ಕೆ ಅದು ನೀರಾಗಿ ಹರಿದು ಬಿಡುವುದೇ? ಅಥವಾ ನದಿಯನ್ನು ಪರ್ವತ ಎಂದರೆ ಅದು ಜಡವಾಗಿ, ಎತ್ತರವಾಗಿ ನಿಂತು ಬಿಡುವುದೇ?! ನಾಳೆಯಿಂದಾ ಹುಟ್ಟುವ ಮಕ್ಕಳಿಗೆಲ್ಲ ನಾಯಿಯನ್ನು ತೋರಿಸಿ ಸಿಂಹ ಎಂದು ಹೇಳಿಕೊಡೋಣ ಎಂದು ಪ್ರಪಂಚದಾದ್ಯಂತ ಒಂದು ಕರಾರು ಮಾಡಿ ಬಿಡೋಣಾ, ಆಗ ಆ ಮಕ್ಕಳು ನಾಯಿಯನ್ನೇ ಸಿಂಹ ಎಂಬ ಭಾವನೆಯೊಂದಿಗೆ ಕರೆಯಲಾರಂಭಿಸುತ್ತವೆ, ಅಂದ ಮಾತ್ರಕ್ಕೆ ನಾಯಿ ಸಿಂಹವಾಗಿ ಬದಲಾಗುವುದೇ?! ಸಿಂಹ ನಾಯಿಯಾಗಿ ಮನೆಯ ಎದುರಿಗೆ ರೊಟ್ಟಿ ತಿನ್ನಲು ಕಾಯುತ್ತಾ ಕೂರುವುದೇ?!
   ಈ ಹುಚ್ಚು ಆಲೋಚನೆಗಳಲ್ಲೇ ನನಗೆ ತೋರಿದ ಪ್ರಶ್ನೆ ನಾನು ಯಾರು? ಹೌದು ನಾನು ಯಾರು??! ನನ್ನ ಹೆಸರಿನಿಂದ ನನ್ನನ್ನು ಗುರುತಿಸಬಹುದು, ಆದರೆ ಆ ಹೆಸರನ್ನು ಬದಲು ಮಾಡಿದರು ನಾನು ನಾನೇ ಅಲ್ಲವೇ?! ಹೆಸರನ್ನು ನಾಲ್ಕು ಜನರ ಸಮ್ಮುಖದಲ್ಲಿ ಖುಷಿಯಾಗಿ ನನ್ನನ್ನು ಗುರುತಿಸಲು ಮಾಡಿಕೊಂಡ ಒಪ್ಪಂದ ಮಾತ್ರವೇ ಹೊರತು ಅದರಲ್ಲಿ ನಾನಂತು ಇಲ್ಲ ಎನ್ನುವುದನ್ನು ನೀವೆಲ್ಲ ಒಪ್ಪುತ್ತೀರಿ ಅಲ್ಲವೇ??!!ನನ್ನ ಹೆಸರಿನ ಅನೇಕ ಜನರಿದ್ದಾರೆ ಹಾಗಾದರೆ ಅವರೆಲ್ಲಾ ನಾನೇನ??
ನನ್ನ ದೇಹಕ್ಕೊಂದು ಆಕಾರವಿದೆ, ಎತ್ತರವಿದೆ, ತೂಕವಿದೆ, ಬಣ್ಣವಿದೆ, ಚಲನೆ ಇದೆ, ಹಾಗೆಂದುಕೊಂಡು, ಆ ದೇಹ ನಾನೇನಾ?? ನಾನು ಹುಟ್ಟಿದಾಗ ಕುಬ್ಜವಾಗಿದ್ದ ದೇಹ ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಲೇ ಇದೆ, ಹಾಗಾದರೆ ನಾನ್ಯಾರು? ನನ್ನ ದೇಹಕ್ಕೆ ರಕ್ತ ಕೊಟ್ಟು, ಉಸಿರು ಕೊಟ್ಟು ಕಾಪಾಡಲು ಹೃದಯವಿದೆ, ಅಂದ ಮಾತ್ರಕ್ಕೆ ನಾನು ಬರಿ ಹೃದಯನಾ? ಹೃದಯದಿಂದ ರಕ್ತ ಹೀರಿ ಜೀವಂತ ಆಗಿರುವ ನನ್ನ ತಲೆಯಲ್ಲಿ ಒಂದು ಮೆದುಳಿದೆ, ಆ ಮೆದುಳು ನಾನೇನಾ? ಇಲ್ಲಿ ಜೀವಂತ ಎನ್ನುವ ಪದವೇ ಒಂದು ಒಗಟು, ಹಾಗಾದರೆ ನಿಜವಾಗಿಯೂ ನಾನ್ಯಾರು, ಇಲ್ಲಿ ಇನ್ನೊದು ಪ್ರಶ್ನೆ, ಈ “ನಿಜ” ಎನ್ನುವುದು, ನನಗೆ ನಿಜವಾಗಿರುವುದೋ? ಅಥವಾ ನನ್ನ ಸುತ್ತಮುತ್ತಲಿನ ನನ್ನ ಹಾಗೆಯೇ ಚಲನೆ ಇರುವವರಿಗೋ? ಅಥವಾ ಇನ್ನ್ಯಾರೋ ಕಣ್ಣಿಗೆ ಕಾಣದವರಿಗೋ? ಚಿಕ್ಕಂದಿನಿಂದಲೂ ನನಗ್ಯಾಕೋ ಎಲ್ಲವು ಅಜಲು ಗೊಜಲು, ಒಮ್ಮೆ ಪರೀಕ್ಷೆಯಲ್ಲಿ ನೂರಕ್ಕೆ ೯೦ ಅಂಕ ತೆಗೆದುಕೊಂಡರೆ ಬೆನ್ನು ತಟ್ಟುವ ಜನ, ಅದೇ ಮುಂದಿನ ಪರೀಕ್ಷೆಯಲ್ಲೂ ೯೦ ಕೊಂಡೆ, ಆಗ ಅದೇ ಜನ ನನ್ನನ್ನು ಕಡೆಗಾಣಿಸಿದರು, ಕಾರಣವೇನು, ಇನ್ನೊಂದು ಚಲನೆಯುಳ್ಳ ದೇಹ ೯೮ ಅಂಕ ಪಡೆದುಕೊಂಡಿತ್ತು!!!!
ಇಲ್ಲಿ ನನ್ನ ಅಂಕಗಳು ಸ್ಥಿರವಾಗಿದ್ದರು, ಅದನ್ನು ನೋಡುವವರ ಮನಸ್ಥಿತಿ ಬದಲಾಗಿ ಹೋಯ್ತು! ಹಾಗೆಂದು ನಾನೂ ಅವರನ್ನು ಒಲಿಸಲು ಪ್ರಯತ್ನಿಸುವುದು ನಿಜವಾದ ನಾನೇ?!!
   ಈ ಮನಸ್ಸು ಅಥವಾ ಮನಸ್ಥಿತಿಯನ್ನು ನಾನು ಎನ್ನೋಣ ಎಂದರೆ, ಅದು ಯಾವಾಗಲು ಬದಲಾಗುತ್ತಲೇ ಇದೆ, ಇಂದು ಕಂಡ ವಿಸ್ಮಯಗಳು ನಾಳೆ ಸಾಮಾನ್ಯ ವಿಷಯವಾಗಿರುತ್ತದೆ, ನಿನ್ನೆ ಕಂಡ ಕನಸುಗಳು ಇಂದು ಮರೆತೇ ಹೋಗಿರುತ್ತವೆ, ಕೊನೆ ಪಕ್ಷ, ಈ ದೇಹ, ಮನಸು, ಹೆಸರು, ಉಸಿರು ಎಲ್ಲವನ್ನು ಕೂಡಿಸಿ ನಾನು ಎನ್ನೋಣ ಎಂದರೆ, ಒಂದು ಇಲ್ಲದೆ ಇನ್ನೊಂದಕ್ಕೆ ಅರ್ಥವೇ ಇಲ್ಲದ ಪರಿಸ್ಥಿತಿ, ಮೊನ್ನೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಕಲೆಕ್ಟರ್ ಎಂದು ಎಲ್ಲರಿಂದ ಕರೆಸಿಕೊಳ್ಳುವ ಜೀವ ಬಂದು, ನಿಮ್ಮ ಐಡಿ ಕಾರ್ಡ್ ಕೊಡಿ ಎಂದು ಕೇಳಿತು, ಎದುರಿಗೆ ಇದ್ದ ನನ್ನ ದೇಹ, ಮನಸು,ಹೆಸರು ಉಸಿರು ಯಾವುದಕ್ಕೂ ಬೆಲೆಯೇ ಇಲ್ಲದಂತೆ ಆ ಜೀವ ನನ್ನ ದೇಹದಲ್ಲಿರುವ ಮುಖದ ಕಡೆಗೂ ನೋಡದೆ, ಐಡಿ ಕಾರ್ಡ್ ನೋಡಿ ಸುಮ್ಮನೆ ಹೋಯಿತು!!ಹಾಗಾದರೆ ಐಡಿ ಕಾರ್ಡೇ ನಾನು ಎನ್ನೋಣವೆಂದರೆ,ಆ ಕಾರ್ಡ್ ಇಲ್ಲದೆಯೂ ನನ್ನ ದೇಹ ಚಲಿಸಲು ಶಕ್ತಿ ಹೊಂದಿತ್ತು, ಇಲ್ಲಿ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ, ನನ್ನವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ, ಅದಕ್ಕೂ ಉತ್ತರ ಸಿಕ್ಕರೆ ನನ್ನದು ಎಂಬ ವಸ್ತು ಇಲ್ಲಿ ಏನಿದೆ ಎಂಬಾ ಪ್ರಶ್ನೆ ಏಳುತ್ತದೆ, ಸುಮ್ಮನೆ ನನ್ನ ತಂದೆ ತಾಯಿಯನ್ನು ನನ್ನವರು ಎಂದುಕೊಳ್ಳೋಣ ಎಂದರೆ, ಈ ದೇಹದ ಬದಲು ಬೇರೆ ಒಂದು ದೇಹ-ಮನಸ್ಸು ಅವರ ಗರ್ಭದಲ್ಲಿ ಜನಿಸಿದ್ದಿದ್ದರೆ, ನನ್ನ ದೇಹಕ್ಕಿದ್ದ ಹೆಸರು ಆ ದೇಹಕ್ಕೆ ಇರುತ್ತಿತ್ತು, ಆಗ ಅವರು ಆ ದೇಹದ ತಂದೆ ತಾಯಿಗಳಾಗಿರುತ್ತಿದ್ದರು, ಆಗ ನಾನು ಎಂದು ಎಲ್ಲರಿಂದ ಗುರುತಿಸಿಕೊಳ್ಳುವ ದೇಹ-ಮನಸೂ ಏನು ಇರುತ್ತಿರಲಿಲ್ಲ!!ನನ್ನ ದೇಹ-ಮನಸು ಇಲ್ಲ ಎಂದ ಮಾತ್ರಕ್ಕೆ ನಾನು ಇಲ್ಲವೇ ಇಲ್ಲ ಎಂದು ಅರ್ಥವೇ?!!
   ಇಲ್ಲಿಯೇ ಇನ್ನೊಂದು ವಿಚಾರ, ದೇಹ ಒಂದು ಶಕ್ತಿ, ಕೆಲವೊಮ್ಮೆ ಒಪ್ಪಲಾಗುವುದಿಲ್ಲ, ಯಾಕೆಂದರೆ ಮನಸ್ಸು ಎನ್ನುವುದು ಇಲ್ಲದೆ ದೇಹಕ್ಕೆ ಬೆಲೆ ಇಲ್ಲ! ಸರಿ, ದೇಹ-ಮನಸು ಎರಡು ಶಕ್ತಿಯ ರೂಪಗಳು, ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತೆಗೆದುಕೊಂಡು ಹೋಗುವಾಗ ಸಂಪೂರ್ಣ ರೂಪಾಂತರ ಅಸಾಧ್ಯ, ಸ್ವಲ್ಪ ಮಟ್ಟದ ಶಕ್ತಿ ಬೇರೆ ಬೇರೆ ರೂಪದಲ್ಲಿ ವ್ಯಯವಾಗಿ ಹೋಗುತ್ತದೆ, ಅದನ್ನು ವಿಜ್ಞಾನ ಸಾಬೀತುಪಡಿಸಿದೆ, ಹಾಗಾದರೆ, ಎಷ್ಟೋ ವರ್ಷಗಳಿಂದ ರೂಪಾಂತರ ಹೊಂದಿ ಹೊಂದಿ ಬರುತ್ತಿರುವ ನಮ್ಮ ದೇಹ-ಮನಸಿನ ಶಕ್ತಿ ಕೂಡ ಒಂದು ದಿನ ನಶಿಸಿ ಹೋಗಿ ಬಿಡಬಹುದಲ್ಲಾ, ಆಗ ಬೇರೆ ರೂಪದಲ್ಲಿ ವ್ಯಯವಾದ ಶಕ್ತಿ ಏನಾಗಿರುತ್ತದೆ ?? ಅಥವಾ ಇಲ್ಲಿ ವಿಜ್ಞಾನ ಎನ್ನುವ ಪದ ಎಲ್ಲವನ್ನು ಸಾಬಿತು ಮಾಡುವ ವರೆಗೂ ಇದ್ದ ಎಲ್ಲ ಶಕ್ತಿಯ ರೂಪಗಳು, ನೈಸರ್ಗಿಕ ಕ್ರಿಯೆಗಳು, ಇದ್ದೆ ಇರಲಿಲ್ಲ ಎನ್ನಲಾಗುತ್ತದೆಯೇ?
    ಭಾಷೆಯ ರೂಪದಲ್ಲಿ, ಅಥವಾ ಭಾಷೆಯ ಮೂಲಕ ಹುಟ್ಟಿದ ದೇಹ ಸುತ್ತಲಿನ ಪ್ರಕೃತಿಯೊಂದಿಗೆ ಒಡನಾಟ ಹೊಂದುತ್ತದೆ ಸತ್ಯವೇ??? ಹಾಗಾದರೆ ಯಾವುದೇ ಬಾಷೆ ಅರಿಯದ ಚಿಕ್ಕ ಮಗುವಿನ ಬಾಯಿಗೆ ಸಕ್ಕರೆ ಹಾಕಿದರೆ ಸುಮ್ಮನೆ ಚೀಪುತ್ತದೆ!! ಅದೇ ಬೇವಿನ ಎಲೆಯನ್ನೋ, ಹಾಗಲಕಾಯಿಯನ್ನೊ ಹಾಕಿದರೆ ಕಿಟಾರನೆ ಕಿರುಚಿ ಬಿಡುತ್ತದೆ!! ನಿಜವಾದ ಇಂದ್ರಿಯ ಚರ್ಮ ಮಾತ್ರ, (ನಾಲಿಗೆಯ ಚರ್ಮ ಕೂಡ ಸೇರಿಸಿಕೊಂಡು) ಎಂದು ಹೇಳಲು ಬರುತ್ತದೆಯೇ?  ಈ ದೇಹ ಹಾಗು ಮನಸ್ಸು?? ಈ ಭೂಮಿಯೆಂಬ ಹೆಸರಿನ ಗೋಲದ ಮೇಲೆ ಎಲ್ಲಿಂದ ಬಂತು, ಎಲ್ಲವು ಪ್ರಶ್ನೆಗಳೇ??
ನಾನು ಬದುಕಿದ್ದರೆ ನನಗೆ ಸಾವಿಲ್ಲ??! ಸಾವಿದ್ದರೆ ಬದುಕು ಬೇಕಂತಲೇ ಇಲ್ಲ!! ದಿನಗಳ ಎಣಿಕೆ! ಬಾಲ್ಯದ ಕನಸು! ಯವ್ವನದ ನೆನಪು!ವೃದ್ದಾಪ್ಯದ ಮೆಲುಕು!ಆಮೇಲೇನು ? ಪ್ರಶ್ನೆಗಳು ಹಾಗೆ ಅಲ್ಲವೇ?? ಕಾಡುತ್ತಲೇ ಇರುತ್ತವೆ!!
ಸಂಜೆ ಆಯಿತು, ಹೊಟ್ಟೆ ತಾಳ ಹಾಕುತಿತ್ತು, ಕುಳಿತಲ್ಲಿಂದ ಎದ್ದು ಬಂದೆ!!
(ಸುಮ್ಮನೆ ತಮಾಷೆಗೆ– ಇಷ್ಟೆಲ್ಲಾ ಆದಮೇಲು ನಮಗೆ ಕಾಡುವ ಪ್ರಶ್ನೆ “ಹೀಗೂ ಉಂಟೇ”?!!ಹ್ಹ ಹ್ಹ )