Tuesday, 9 May 2017

ಗುರುಪೌರ್ಣಮಿ

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ….

ತಾಯಿ ನಮ್ಮ ಮೊತ್ತ ಮೊದಲ ಗುರು.
ತಂದೆ ಅನಂತರದ ಗುರು.
ಶಾಲಾ ಕಾಲೇಜಿನ ಅಧ್ಯಾಪಕರು ನಂತರದ ಗುರುಗಳು.

ಜೀವನದಲ್ಲಿ ಯಾವುದೇ ಕಡೆಯಿಂದ ಲಭಿಸುವ ಜ್ಞಾನ ಮತ್ತು ಅನುಭವವೂ ಗುರುವಾಗಿದೆ.

ವಿಧಿಯಾಟದಿಂದ ನಮ್ಮನ್ನು ಪರೀಕ್ಷಿಸುವ ಸರ್ವಶಕ್ತ ಮತ್ತು ಅವನಿಂದ ಲಭಿಸುವ ಪಾಠವೂ ಗುರುವೇ ಆಗಿದೆ.

ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ನಡೆಸುವ ವಿವೇಕ, ಜ್ಞಾನ ಮತ್ತು ಶಕ್ತಿಯ ಸಂಯುಕ್ತ ಸಂಕೇತವೇ "ಗುರು"

ನಮ್ಮಲ್ಲಿನ ಅಜ್ಞಾನವನ್ನು ತೊಲಗಿಸಿ ಜ್ಞಾನದೀಪವನ್ನು ಯಾರು ಬೆಳಗಿಸುವರೋ ಅವರೇ ನಿಜವಾದ ಗುರುಗಳು..

ಬದುಕೆಂಬ ಪಾಠಶಾಲೆಗೆ, ಬದುಕಿನ ಪಾಠ ಕಲಿಸಿದ ಎಲ್ಲಾ ಗುರುಗಳಿಗೆ ಭಕ್ತಿಪೂರ್ವಕ ನಮನ.🙏

🌸ಎಲ್ಲರಿಗೂ ಒಳಿತಾಗಲಿ..ಎಲ್ಲರಿಗೂ ಶುಭವಾಗಲಿ..🙏

ಗುರುಪೌರ್ಣಮಿಯ ಶುಭಾಶಯಗಳು✨

Monday, 20 March 2017

‪ಒಂದು ಸುಂದರ ಸಂಜೆ

 ನಾವು ಎಷ್ಟೇ ಕಲಿತು graduates, post graduates, doctorates, many more ಆಗಿದ್ರೂ, ಪ್ರಕೃತಿ, ಸೂರ್ಯ, ಚಂದ್ರ, ಚುಕ್ಕಿ, ತಾರೆ, ನಭೋಮಂಡಲ ಮುಂತಾದವುಗಳ ಕುರಿತು ಸಾಕಷ್ಟು ಮಾಹಿತಿ ದೊರೆತಿದ್ದರೂ, ಸೂರ್ಯ-ಚಂದ್ರ ಇದ್ದಲ್ಲೇ ಇರ್ತಾರೆ, ಭೂಮಿ ತಿರುಗುತ್ತದೆ, day and night occurs due to the rotation of earth on its axis..ಅನ್ನೋ fact ಗೊತ್ತಿದ್ರೂ ಅದೇಕೋ ಏನೋ ಗೊತ್ತಿಲ್ಲ ನನಗೆ sunrise sunset ನೋಡಿದಾಗಲೆಲ್ಲ ಮತ್ತು shifts ಮೇಲೆ work ಮಾಡೋ techies ನೋಡಿದಾಗಲೆಲ್ಲ "ನನ್ನ ಅಮ್ಮ" ನೆನಪಾಗ್ತಾಳೆ. .
ಚಿಕ್ಕಂದಿನಲ್ಲಿ ಅಮ್ಮ ನನಗೆ ಊಟ ಮಾಡಿಸ್ತಿರೋವಾಗ ಅಮ್ಮ ಸೂರ್ಯ ಸಂಜೆಯಾದ ಮೇಲೆ ಎಲ್ಲಿ ಹೋಗ್ತಾನೆ ಅಂತ ಕೇಳಿದಾಗ, ಸೂರ್ಯ-ಚಂದ್ರ ಭೂಮಿ ತಾಯಿಯ ಎರಡು ಮಕ್ಕಳು..ಸಂಜೆಯಾದ ಮೇಲೆ ಸೂರ್ಯ ಅಮ್ಮನ ಹತ್ತಿರ ಹೋಗ್ತಾನೆ ಊಟ ಮಾಡಿ rest ಮಾಡಿ ಬೆಳಿಗ್ಗೆ ಬರ್ತಾನೆ ಅಲ್ಲಿವರೆಗೂ ಚಂದ್ರ ಭೂಮಿ ಕಾಯ್ತಾನೆ. .ಮತ್ತೇ ಬೆಳಿಗ್ಗೆ ಸೂರ್ಯನ ಪಾಳಿ. . ಅಮ್ಮ ಹೇಳಿದ ಆ ಕತೆ ಎಷ್ಟೊಂದು ಸುಂದರ. .  ಸೂರ್ಯಾಸ್ತ-ಸೂರ್ಯೋದಯ ನೋಡೋದಂದ್ರೆ ನಂಗೆ ಪಂಚಪ್ರಾಣ, ತುಂಬಾ ಖುಷಿ.. ಆ ವೇಳೆ ಬಾನಲ್ಲಿ ಮೂಡಿದ ಚಿತ್ತಾರ ನೋಡಿದಾಗಲೆಲ್ಲ ಅಮ್ಮ ಮತ್ತು ಅಮ್ಮ ಹೇಳಿದ ಆ ಕತೆ ನನ್ನೆದೆಲಿ ಬೆಚ್ಚನೆಯ ಅನುಭವ ನೀಡುತ್ತದೆ. .
love u lots ಅಮ್ಮ

Sunday, 5 March 2017

ಹೀಗೂ ಉಂಟೇ??!!

ಜೀವನದಲ್ಲಿ ಒಂದು ರೋಚಕ ಅನುಭವ,ಒಂದೆಡೆ ಯೋಚನೆ/ಆಲೋಚನೆ /ಆತಂಕ, ಮತ್ತೊಂದೆಡೆ ಜೀವನದಲ್ಲಿ ಮಹತ್ತರ ಏನೋ ಸಾಧನೆ ಮಾಡಿದ ಖುಷಿ/ಹೇಳಲಾಗದ/ಮರೆಯಲಾಗದ ಅದ್ಭುತ ಅನುಭವ! ಅನುಭವಿಸಿದವರಿಗೇ ಗೊತ್ತು.....!
  ನಾನು ಇಂದು ಸುಮ್ಮನೆ ನನ್ನ ರೂಮಿನ ಪಕ್ಕದಲ್ಲಿ ಕುಳಿತು, ಅನತಿ ದೂರದಲ್ಲಿ ಕಾಣುವ ಬೆಟ್ಟವನ್ನು ನೋಡುತ್ತಾ ಕೆಲಸಕ್ಕೆ ಬಾರದ ಆಲೋಚನೆಗಳನ್ನು ಮಾಡುತ್ತಿದ್ದೆ, ಸುಮ್ಮನೆ ಎಲ್ಲಿಂದಲೋ ಹಾರಿ ಬಂತೊಂದು ಹಕ್ಕಿ, ಹಕ್ಕಿ ಹಾರಿ ಬಂದು ನನ್ನ ಎದುರಲ್ಲಿ ಕುಳಿತದ್ದಕ್ಕಾಗಿ ಮಾತ್ರ ಆ ಹಕ್ಕಿಯ ಇರುವಿಕೆ ನನಗೆ ತಿಳಿಯಿತಲ್ಲವೇ??! ಹಾಗಾದರೆ ಪ್ರಪಂಚದ ಅಷ್ಟು ಹಕ್ಕಿಗಳು ನನಗೆ ಕಾಣಲು ಸಾದ್ಯವೇ?? ಖಂಡಿತ ಸಾದ್ಯವಿಲ್ಲ! ಅಂದ ಮಾತ್ರಕ್ಕೆ ಆ ಹಕ್ಕಿಗಳೇ ಇಲ್ಲ ಎನ್ನುವುದು ತಪ್ಪಲ್ಲವೆ??!
ಇದೇ ತರ್ಕವನ್ನು ಕಾಲೇಜಿನ ಪರೀಕ್ಷೆಗೆ ಹೋಲಿಸಿ ನೋಡಿದರೆ, ನಾನು ಬರೆದಷ್ಟು ಮಾತ್ರ, ಕರೆಕ್ಷನ್ ಮಾಡುವವರಿಗೆ ಕಾಣಿಸುತ್ತದೆ! ಹಾಗಾದರೆ ಬರೆಯದೆ ಇರುವುದು ನನಗೆ ಗೊತ್ತಿಲ್ಲ ಎಂದು ಅರ್ಥವೇ?!
ಬಹುಷಃ ಗೊತ್ತಿದ್ದರು ನೆನಪಿಲ್ಲದಿರಬಹುದು ಅಲ್ಲವೇ?! ಇದೆಲ್ಲ ಬರಿಯ ಆಲೋಚನೆಗಳು ಅಷ್ಟೇ, ಎಷ್ಟೋ ಬಾರಿ ನಾವು ಬೇರೆಯವರ ಮೌನವನ್ನು ನೋಡಿ ಅವರಿಗೆ ಏನು ಗೊತ್ತಿಲ್ಲ ಎಂದು ತಿಳಿದು ಸುಮ್ಮನಾಗಿರುತ್ತೇವೆ, ಆದರೆ ಗೊತ್ತಿರುವವರೆಲ್ಲರು ಪ್ರಚುರ ಪಡಿಸಬೇಕೆಂದೇನು ಇಲ್ಲ, ಬರೆದವನು ಮಾತ್ರ ಕವಿ ಅಲ್ಲ, ಎಷ್ಟೋ ಬಾರಿ ಬರೆಯದೆ ಸುಮ್ಮನೆ ಕುಳಿತವನು ಕೂಡ ಕವಿಯೇ, ಈ ರೀತಿಯ ಆಲೋಚನೆಗಳು ತಲೆಯಲ್ಲಿ ಓಡಾಡುತ್ತಲೇ ಇತ್ತು, ಆದರೆ ಪರ್ವತ ಮಾತ್ರ ಹಾಗೆ ನಿಂತಿತ್ತು, ಅದನ್ನು ನಾವು ಪರ್ವತ ಎಂದು ಯಾಕೆ ಕರೆಯಬೇಕು ನದಿ ಎಂದು ಕರೆದರೆ ತಪ್ಪೇ?? ಎಂತಾ ಹುಚ್ಚು ಪ್ರಶ್ನೆ ಅಲ್ಲವೇ?! ಪ್ರಪಂಚದ ಎಲ್ಲಾ ಜಡ,ಜೀವಂತ ವಸ್ತುಗಳನ್ನು ನಾವು ಭಾಷೆ ಹಾಗೂ ಅಕ್ಷರಗಳಲ್ಲಿ ಕಟ್ಟಿ ಹಾಕಿದ್ದೇವೆಲ್ಲ? ಪರ್ವತವನ್ನು ನದಿ ಎಂದು ಕರೆದ ಮಾತ್ರಕ್ಕೆ ಅದು ನೀರಾಗಿ ಹರಿದು ಬಿಡುವುದೇ? ಅಥವಾ ನದಿಯನ್ನು ಪರ್ವತ ಎಂದರೆ ಅದು ಜಡವಾಗಿ, ಎತ್ತರವಾಗಿ ನಿಂತು ಬಿಡುವುದೇ?! ನಾಳೆಯಿಂದಾ ಹುಟ್ಟುವ ಮಕ್ಕಳಿಗೆಲ್ಲ ನಾಯಿಯನ್ನು ತೋರಿಸಿ ಸಿಂಹ ಎಂದು ಹೇಳಿಕೊಡೋಣ ಎಂದು ಪ್ರಪಂಚದಾದ್ಯಂತ ಒಂದು ಕರಾರು ಮಾಡಿ ಬಿಡೋಣಾ, ಆಗ ಆ ಮಕ್ಕಳು ನಾಯಿಯನ್ನೇ ಸಿಂಹ ಎಂಬ ಭಾವನೆಯೊಂದಿಗೆ ಕರೆಯಲಾರಂಭಿಸುತ್ತವೆ, ಅಂದ ಮಾತ್ರಕ್ಕೆ ನಾಯಿ ಸಿಂಹವಾಗಿ ಬದಲಾಗುವುದೇ?! ಸಿಂಹ ನಾಯಿಯಾಗಿ ಮನೆಯ ಎದುರಿಗೆ ರೊಟ್ಟಿ ತಿನ್ನಲು ಕಾಯುತ್ತಾ ಕೂರುವುದೇ?!
   ಈ ಹುಚ್ಚು ಆಲೋಚನೆಗಳಲ್ಲೇ ನನಗೆ ತೋರಿದ ಪ್ರಶ್ನೆ ನಾನು ಯಾರು? ಹೌದು ನಾನು ಯಾರು??! ನನ್ನ ಹೆಸರಿನಿಂದ ನನ್ನನ್ನು ಗುರುತಿಸಬಹುದು, ಆದರೆ ಆ ಹೆಸರನ್ನು ಬದಲು ಮಾಡಿದರು ನಾನು ನಾನೇ ಅಲ್ಲವೇ?! ಹೆಸರನ್ನು ನಾಲ್ಕು ಜನರ ಸಮ್ಮುಖದಲ್ಲಿ ಖುಷಿಯಾಗಿ ನನ್ನನ್ನು ಗುರುತಿಸಲು ಮಾಡಿಕೊಂಡ ಒಪ್ಪಂದ ಮಾತ್ರವೇ ಹೊರತು ಅದರಲ್ಲಿ ನಾನಂತು ಇಲ್ಲ ಎನ್ನುವುದನ್ನು ನೀವೆಲ್ಲ ಒಪ್ಪುತ್ತೀರಿ ಅಲ್ಲವೇ??!!ನನ್ನ ಹೆಸರಿನ ಅನೇಕ ಜನರಿದ್ದಾರೆ ಹಾಗಾದರೆ ಅವರೆಲ್ಲಾ ನಾನೇನ??
ನನ್ನ ದೇಹಕ್ಕೊಂದು ಆಕಾರವಿದೆ, ಎತ್ತರವಿದೆ, ತೂಕವಿದೆ, ಬಣ್ಣವಿದೆ, ಚಲನೆ ಇದೆ, ಹಾಗೆಂದುಕೊಂಡು, ಆ ದೇಹ ನಾನೇನಾ?? ನಾನು ಹುಟ್ಟಿದಾಗ ಕುಬ್ಜವಾಗಿದ್ದ ದೇಹ ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಲೇ ಇದೆ, ಹಾಗಾದರೆ ನಾನ್ಯಾರು? ನನ್ನ ದೇಹಕ್ಕೆ ರಕ್ತ ಕೊಟ್ಟು, ಉಸಿರು ಕೊಟ್ಟು ಕಾಪಾಡಲು ಹೃದಯವಿದೆ, ಅಂದ ಮಾತ್ರಕ್ಕೆ ನಾನು ಬರಿ ಹೃದಯನಾ? ಹೃದಯದಿಂದ ರಕ್ತ ಹೀರಿ ಜೀವಂತ ಆಗಿರುವ ನನ್ನ ತಲೆಯಲ್ಲಿ ಒಂದು ಮೆದುಳಿದೆ, ಆ ಮೆದುಳು ನಾನೇನಾ? ಇಲ್ಲಿ ಜೀವಂತ ಎನ್ನುವ ಪದವೇ ಒಂದು ಒಗಟು, ಹಾಗಾದರೆ ನಿಜವಾಗಿಯೂ ನಾನ್ಯಾರು, ಇಲ್ಲಿ ಇನ್ನೊದು ಪ್ರಶ್ನೆ, ಈ “ನಿಜ” ಎನ್ನುವುದು, ನನಗೆ ನಿಜವಾಗಿರುವುದೋ? ಅಥವಾ ನನ್ನ ಸುತ್ತಮುತ್ತಲಿನ ನನ್ನ ಹಾಗೆಯೇ ಚಲನೆ ಇರುವವರಿಗೋ? ಅಥವಾ ಇನ್ನ್ಯಾರೋ ಕಣ್ಣಿಗೆ ಕಾಣದವರಿಗೋ? ಚಿಕ್ಕಂದಿನಿಂದಲೂ ನನಗ್ಯಾಕೋ ಎಲ್ಲವು ಅಜಲು ಗೊಜಲು, ಒಮ್ಮೆ ಪರೀಕ್ಷೆಯಲ್ಲಿ ನೂರಕ್ಕೆ ೯೦ ಅಂಕ ತೆಗೆದುಕೊಂಡರೆ ಬೆನ್ನು ತಟ್ಟುವ ಜನ, ಅದೇ ಮುಂದಿನ ಪರೀಕ್ಷೆಯಲ್ಲೂ ೯೦ ಕೊಂಡೆ, ಆಗ ಅದೇ ಜನ ನನ್ನನ್ನು ಕಡೆಗಾಣಿಸಿದರು, ಕಾರಣವೇನು, ಇನ್ನೊಂದು ಚಲನೆಯುಳ್ಳ ದೇಹ ೯೮ ಅಂಕ ಪಡೆದುಕೊಂಡಿತ್ತು!!!!
ಇಲ್ಲಿ ನನ್ನ ಅಂಕಗಳು ಸ್ಥಿರವಾಗಿದ್ದರು, ಅದನ್ನು ನೋಡುವವರ ಮನಸ್ಥಿತಿ ಬದಲಾಗಿ ಹೋಯ್ತು! ಹಾಗೆಂದು ನಾನೂ ಅವರನ್ನು ಒಲಿಸಲು ಪ್ರಯತ್ನಿಸುವುದು ನಿಜವಾದ ನಾನೇ?!!
   ಈ ಮನಸ್ಸು ಅಥವಾ ಮನಸ್ಥಿತಿಯನ್ನು ನಾನು ಎನ್ನೋಣ ಎಂದರೆ, ಅದು ಯಾವಾಗಲು ಬದಲಾಗುತ್ತಲೇ ಇದೆ, ಇಂದು ಕಂಡ ವಿಸ್ಮಯಗಳು ನಾಳೆ ಸಾಮಾನ್ಯ ವಿಷಯವಾಗಿರುತ್ತದೆ, ನಿನ್ನೆ ಕಂಡ ಕನಸುಗಳು ಇಂದು ಮರೆತೇ ಹೋಗಿರುತ್ತವೆ, ಕೊನೆ ಪಕ್ಷ, ಈ ದೇಹ, ಮನಸು, ಹೆಸರು, ಉಸಿರು ಎಲ್ಲವನ್ನು ಕೂಡಿಸಿ ನಾನು ಎನ್ನೋಣ ಎಂದರೆ, ಒಂದು ಇಲ್ಲದೆ ಇನ್ನೊಂದಕ್ಕೆ ಅರ್ಥವೇ ಇಲ್ಲದ ಪರಿಸ್ಥಿತಿ, ಮೊನ್ನೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಕಲೆಕ್ಟರ್ ಎಂದು ಎಲ್ಲರಿಂದ ಕರೆಸಿಕೊಳ್ಳುವ ಜೀವ ಬಂದು, ನಿಮ್ಮ ಐಡಿ ಕಾರ್ಡ್ ಕೊಡಿ ಎಂದು ಕೇಳಿತು, ಎದುರಿಗೆ ಇದ್ದ ನನ್ನ ದೇಹ, ಮನಸು,ಹೆಸರು ಉಸಿರು ಯಾವುದಕ್ಕೂ ಬೆಲೆಯೇ ಇಲ್ಲದಂತೆ ಆ ಜೀವ ನನ್ನ ದೇಹದಲ್ಲಿರುವ ಮುಖದ ಕಡೆಗೂ ನೋಡದೆ, ಐಡಿ ಕಾರ್ಡ್ ನೋಡಿ ಸುಮ್ಮನೆ ಹೋಯಿತು!!ಹಾಗಾದರೆ ಐಡಿ ಕಾರ್ಡೇ ನಾನು ಎನ್ನೋಣವೆಂದರೆ,ಆ ಕಾರ್ಡ್ ಇಲ್ಲದೆಯೂ ನನ್ನ ದೇಹ ಚಲಿಸಲು ಶಕ್ತಿ ಹೊಂದಿತ್ತು, ಇಲ್ಲಿ ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ, ನನ್ನವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ, ಅದಕ್ಕೂ ಉತ್ತರ ಸಿಕ್ಕರೆ ನನ್ನದು ಎಂಬ ವಸ್ತು ಇಲ್ಲಿ ಏನಿದೆ ಎಂಬಾ ಪ್ರಶ್ನೆ ಏಳುತ್ತದೆ, ಸುಮ್ಮನೆ ನನ್ನ ತಂದೆ ತಾಯಿಯನ್ನು ನನ್ನವರು ಎಂದುಕೊಳ್ಳೋಣ ಎಂದರೆ, ಈ ದೇಹದ ಬದಲು ಬೇರೆ ಒಂದು ದೇಹ-ಮನಸ್ಸು ಅವರ ಗರ್ಭದಲ್ಲಿ ಜನಿಸಿದ್ದಿದ್ದರೆ, ನನ್ನ ದೇಹಕ್ಕಿದ್ದ ಹೆಸರು ಆ ದೇಹಕ್ಕೆ ಇರುತ್ತಿತ್ತು, ಆಗ ಅವರು ಆ ದೇಹದ ತಂದೆ ತಾಯಿಗಳಾಗಿರುತ್ತಿದ್ದರು, ಆಗ ನಾನು ಎಂದು ಎಲ್ಲರಿಂದ ಗುರುತಿಸಿಕೊಳ್ಳುವ ದೇಹ-ಮನಸೂ ಏನು ಇರುತ್ತಿರಲಿಲ್ಲ!!ನನ್ನ ದೇಹ-ಮನಸು ಇಲ್ಲ ಎಂದ ಮಾತ್ರಕ್ಕೆ ನಾನು ಇಲ್ಲವೇ ಇಲ್ಲ ಎಂದು ಅರ್ಥವೇ?!!
   ಇಲ್ಲಿಯೇ ಇನ್ನೊಂದು ವಿಚಾರ, ದೇಹ ಒಂದು ಶಕ್ತಿ, ಕೆಲವೊಮ್ಮೆ ಒಪ್ಪಲಾಗುವುದಿಲ್ಲ, ಯಾಕೆಂದರೆ ಮನಸ್ಸು ಎನ್ನುವುದು ಇಲ್ಲದೆ ದೇಹಕ್ಕೆ ಬೆಲೆ ಇಲ್ಲ! ಸರಿ, ದೇಹ-ಮನಸು ಎರಡು ಶಕ್ತಿಯ ರೂಪಗಳು, ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತೆಗೆದುಕೊಂಡು ಹೋಗುವಾಗ ಸಂಪೂರ್ಣ ರೂಪಾಂತರ ಅಸಾಧ್ಯ, ಸ್ವಲ್ಪ ಮಟ್ಟದ ಶಕ್ತಿ ಬೇರೆ ಬೇರೆ ರೂಪದಲ್ಲಿ ವ್ಯಯವಾಗಿ ಹೋಗುತ್ತದೆ, ಅದನ್ನು ವಿಜ್ಞಾನ ಸಾಬೀತುಪಡಿಸಿದೆ, ಹಾಗಾದರೆ, ಎಷ್ಟೋ ವರ್ಷಗಳಿಂದ ರೂಪಾಂತರ ಹೊಂದಿ ಹೊಂದಿ ಬರುತ್ತಿರುವ ನಮ್ಮ ದೇಹ-ಮನಸಿನ ಶಕ್ತಿ ಕೂಡ ಒಂದು ದಿನ ನಶಿಸಿ ಹೋಗಿ ಬಿಡಬಹುದಲ್ಲಾ, ಆಗ ಬೇರೆ ರೂಪದಲ್ಲಿ ವ್ಯಯವಾದ ಶಕ್ತಿ ಏನಾಗಿರುತ್ತದೆ ?? ಅಥವಾ ಇಲ್ಲಿ ವಿಜ್ಞಾನ ಎನ್ನುವ ಪದ ಎಲ್ಲವನ್ನು ಸಾಬಿತು ಮಾಡುವ ವರೆಗೂ ಇದ್ದ ಎಲ್ಲ ಶಕ್ತಿಯ ರೂಪಗಳು, ನೈಸರ್ಗಿಕ ಕ್ರಿಯೆಗಳು, ಇದ್ದೆ ಇರಲಿಲ್ಲ ಎನ್ನಲಾಗುತ್ತದೆಯೇ?
    ಭಾಷೆಯ ರೂಪದಲ್ಲಿ, ಅಥವಾ ಭಾಷೆಯ ಮೂಲಕ ಹುಟ್ಟಿದ ದೇಹ ಸುತ್ತಲಿನ ಪ್ರಕೃತಿಯೊಂದಿಗೆ ಒಡನಾಟ ಹೊಂದುತ್ತದೆ ಸತ್ಯವೇ??? ಹಾಗಾದರೆ ಯಾವುದೇ ಬಾಷೆ ಅರಿಯದ ಚಿಕ್ಕ ಮಗುವಿನ ಬಾಯಿಗೆ ಸಕ್ಕರೆ ಹಾಕಿದರೆ ಸುಮ್ಮನೆ ಚೀಪುತ್ತದೆ!! ಅದೇ ಬೇವಿನ ಎಲೆಯನ್ನೋ, ಹಾಗಲಕಾಯಿಯನ್ನೊ ಹಾಕಿದರೆ ಕಿಟಾರನೆ ಕಿರುಚಿ ಬಿಡುತ್ತದೆ!! ನಿಜವಾದ ಇಂದ್ರಿಯ ಚರ್ಮ ಮಾತ್ರ, (ನಾಲಿಗೆಯ ಚರ್ಮ ಕೂಡ ಸೇರಿಸಿಕೊಂಡು) ಎಂದು ಹೇಳಲು ಬರುತ್ತದೆಯೇ?  ಈ ದೇಹ ಹಾಗು ಮನಸ್ಸು?? ಈ ಭೂಮಿಯೆಂಬ ಹೆಸರಿನ ಗೋಲದ ಮೇಲೆ ಎಲ್ಲಿಂದ ಬಂತು, ಎಲ್ಲವು ಪ್ರಶ್ನೆಗಳೇ??
ನಾನು ಬದುಕಿದ್ದರೆ ನನಗೆ ಸಾವಿಲ್ಲ??! ಸಾವಿದ್ದರೆ ಬದುಕು ಬೇಕಂತಲೇ ಇಲ್ಲ!! ದಿನಗಳ ಎಣಿಕೆ! ಬಾಲ್ಯದ ಕನಸು! ಯವ್ವನದ ನೆನಪು!ವೃದ್ದಾಪ್ಯದ ಮೆಲುಕು!ಆಮೇಲೇನು ? ಪ್ರಶ್ನೆಗಳು ಹಾಗೆ ಅಲ್ಲವೇ?? ಕಾಡುತ್ತಲೇ ಇರುತ್ತವೆ!!
ಸಂಜೆ ಆಯಿತು, ಹೊಟ್ಟೆ ತಾಳ ಹಾಕುತಿತ್ತು, ಕುಳಿತಲ್ಲಿಂದ ಎದ್ದು ಬಂದೆ!!
(ಸುಮ್ಮನೆ ತಮಾಷೆಗೆ– ಇಷ್ಟೆಲ್ಲಾ ಆದಮೇಲು ನಮಗೆ ಕಾಡುವ ಪ್ರಶ್ನೆ “ಹೀಗೂ ಉಂಟೇ”?!!ಹ್ಹ ಹ್ಹ )

Saturday, 25 February 2017

ಕಿಟಕಿಯಾಚೆ..

    ಎದುರುಗಡೆ ಟೇಬಲ್ ಮೇಲೆ DELL ಲ್ಯಾಪ್ ಟಾಪ್ ಅಗಲವಾಗಿ ಬಾಯಿ ತೆರೆದು ಕುಳಿತಿತ್ತು. ೩೨.೫*೧೯.೫" ಸ್ಕ್ರೀನ್ ನಲ್ಲಿ ಯಾವುದೋ ತೆಲುಗು ಸಾಂಗ್ ಪ್ಲೇ ಅಗ್ತಾ ಇತ್ತು. ಆದರೆ ಅವಳ ದೃಷ್ಟಿ ಕಿಟಕಿಯಿಂದ ಕಾಣುತ್ತಿರುವ ಹೊರಪ್ರಪಂಚದ ಮೇಲಿತ್ತು. ಗಮನವೆಲ್ಲಾ ವಾಹನಗಳ ಓಡಾಟದ ಭರಾಟೆಯಿಂದ ಉಂಟಾಗುತ್ತಿದ್ದ ಕರ್ಕಶ ಶಬ್ದಗಳ ಮೇಲೆ. ತನ್ನ ಮನಸು ಕೂಡ ಕಳೆದ ಹಲವು ತಿಂಗಳುಗಳಿಂದ ಇದೇ ರೀತಿ ಅಶಾಂತತೆಯಿಂದ ತುಂಬಿಹೋಗಿದೆ. ಮನದ ಹೆದ್ದಾರಿಯಲ್ಲಿ ಯಾವಾಗ ನೋಡಿದರೂ ಟ್ರಾಫಿಕ್ ಜಾಮ್. ಒಂದಲ್ಲ ಒಂದು ವಾಹನದಿಂದಾಗಿ ಪ್ರತಿದಿನವೂ ಕರ್ಕಶ ಸೌಂಡುಗಳು ತಪ್ಪಿದ್ದಲ್ಲ. "ಹೇ ದೇವಾ, ಈ ಟ್ರಾಫಿಕ್ ಜಾಮ್ನಿಂದ ನನ್ನ ಮನಸನ್ನು ಹೇಗೆ ಮುಕ್ತಗೊಳಿಸಲಿ?"! ದೊಡ್ಡದಾಗಿ ಒಮ್ಮೆ ನಿಟ್ಟುಸಿರು ಬಿಟ್ಟಳು.
                 ಅವಳಿಗೆ ಯಾವತ್ತೂ ಬಗೆಹರಿಯದ ಸಂಗತಿ ಒಂದಿದೆ. ‘ನಮ್ಮ ಜೀವನ ನಮ್ಮ ಕೈಯ್ಯಲ್ಲಿ’, ‘Life is what you make it’, ‘ನಾವೇ ನಮ್ಮ ಜೀವನವೆಂಬ ನಾಟಕದ ಸೂತ್ರಧಾರರು’ - ಇಂತಹ ಡೈಲಾಗ್ಸ್ ಗಳನ್ನು ಹೇಳುತ್ತಲೂ ಕೂಡ ನಾವೇಕೆ ಸಂಪೂರ್ಣವಾಗಿ ನಮ್ಮದು ಎನ್ನುವ ಏಕ ಮಾತ್ರ ಆಸ್ತಿಯಾದ 'Life'ನ್ನು  ವ್ಯಾಖ್ಯಾನಿಸುವ ಹಕ್ಕನ್ನು ಇನ್ನೊಬ್ಬರಿಗೆ ಬಿಟ್ಟುಕೊಡುತ್ತೇವೆ? ತಿಳಿದೂ ಸಹ ಮಾಡುವ ತಪ್ಪು ಇದೇ ಅಲ್ಲವೇ? ...ಈ ಸಮಯದಲ್ಲಿ ಮೆದುಳು ಎನ್ನುವ ಬುದ್ಧಿಜೀವಿ ಏನು ಮಾಡುತ್ತಿರುತ್ತದೆ...? ನಮ್ಮ ಜೀವನದ remote controller ನು ನಿಯಂತ್ರಿಸಲು ನಾವೇನು ಬೇರೆಯವರಿಗೆ ಕೊಟ್ಟಿದ್ದೇವಾ????
              FB ಓಪನ್ ಮಾಡಿ ಕೂತಾಗಲೆಲ್ಲಾ ಅವಳಿಗೆ ಒಂದು ವಿಷಯ ಮತ್ತೆ ಮತ್ತೆ ನೆನಪಾಗುತ್ತದೆ. ವ್ಯಕ್ತಿಯೊಬ್ಬ ಎಷ್ಟರ ಮಟ್ಟಿಗೆ ಸೋಷಿಯಲ್ ನೆಟ್ ವರ್ಕ್ ಮೇಲೆ ಡಿಪೆಂಡ್ ಆಗಿದ್ದಾನೆಂ(ಳೆಂ)ದರೆ ಎದುರಿಗೆ ಸಿಕ್ಕಿದಾಗ ಅಥವಾ ಕಾಲ್ ಮಾಡಿದಾಗ ಮಾತನಾಡಲು ಸಮಯವಿರುವುದಿಲ್ಲ. ಅದೇ FBಲಿ ಚಾಟ್ ಮಾಡಲು ಅವನಿ(ಳಿ)ಗೆ ಬೇಜಾನ್ ಪುರಸೊತ್ತಿರುತ್ತದೆ. ಜೀವಂತಿಕೆಗಿಂತ ನಿರ್ಜೀವತೆಯತ್ತಲೇ ಮೋಹ ಜಾಸ್ತಿಯಾಗುತ್ತಿದೆ. ಇದನ್ನು ಅವರಿಗೆ ಅರ್ಥ ಮಾಡಿಸುವುದಾದರೂ ಹೇಗೆ? ಯಾಕೆಂದರೆ ಆಮೇಲೆ ಒಂದು ಅಲ್ಟಿಮೇಟ್ ಸ್ಟೇಟ್ಮೆಂಟ್ ನೀಡಬಾರದಲ್ಲ... ‘ನಿನಗೆ ಜಗತ್ತಿನಲ್ಲಿ ಯಾರೂ ಸರಿಯಾಗಿ ಕಾಣಿಸಲ್ಲ’..!
            ನಿಜ, ಜಗತ್ತಿನಲ್ಲಿ ಯಾರೂ ಸರಿಯಲ್ಲ. Nobody/Nothing is perfect. ಈ ನಮ್ಮ ಭೂಮಿಯೇ ಪೂರ್ತಿ ದುಂಡಗಿಲ್ಲ. ಮೇಲ್ಭಾಗದಲ್ಲಿ ಚಪ್ಪಟೆಯಾಗಿದ್ದು ನಡುವೆ ಉಬ್ಬಿದೆ. ಅದೇ ರೀತಿ ಮನುಷ್ಯ ಕೂಡ. ಕೆಲವೊಂದು ಗುಣಗಳು ಚಪ್ಪಟೆಯಾಗಿ ಸೊರಗಿಹೋಗಿದ್ದರೆ, ಇನ್ನು ಕೆಲವು ದೃಢವಾಗಿ ಉಬ್ಬಿಕೊಂಡಿರುತ್ತವೆ. ಇದರ ಅರಿವು ಪ್ರತಿ ಮನುಷ್ಯನಿಗೂ ಇರುತ್ತದೆ. ಆದರೆ ಬೇರೆಯವರು ಹೇಳಿದಾಗ ಮಾತ್ರ ಅರಿವೆಂಬ ಕಿಡಿ ಆರಿಹೋಗಿ ಅವಿವೇಕದ ಬೂದಿ ಆವರಿಸುತ್ತದೆ.
         ಅಲಾರಂ ಗಡಿಯಾರ ಬಾರಿಸಿತು. ಅವಳು ಕಿಟಕಿಯಿಂದ ಇತ್ತ ದೃಷ್ಟಿ ಹರಿಸಿದಳು. ಥತ್, ಏನೇನೋ ಯೋಚನೆ ಮಾಡಿಬಿಟ್ಟೆ. ಒಂದಕ್ಕೊಂದಕ್ಕೂ ಸಂಬಂಧವೇ ಇಲ್ಲದಂತೆ ಎತ್ತೆತ್ತಲೋ ತನ್ನ ಆಲೋಚನಾ ಕುದುರೆ ಓಡಿತಲ್ಲ ಎನಿಸಿತು. ಮನಸ್ಸಿಗೆ ಏನೋ ಸ್ವಲ್ಪ ಸಮಾಧಾನವಾಯಿತು. ಇದನ್ನೆಲ್ಲಾ ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದುಕೊಂಡಳು. ಮರುಕ್ಷಣವೇ ನೆನಪಾಯಿತು, ‘ಜೀವಂತಿಕೆಗಿಂತ ನಿರ್ಜೀವತೆಯತ್ತ ಮೋಹ ಜಾಸ್ತಿ’. ಮುಗುಳ್ನಗುತ್ತಲೇ Statusನಲ್ಲಿ ಹಾಕಿದರಾಯಿತು ಎಂದುಕೊಳ್ಳುತ್ತಾ ಕುರ್ಚಿಯಿಂದ ಮೇಲೆದ್ದಳು. ಲ್ಯಾಪ್ ಟಾಪ್ ನಲ್ಲಿ ಈಗ ಸಾಂಗ್ ಪ್ಲೇ ಆಗುತ್ತಿತ್ತು, ‘ಸಂಚಾರಿ ನೀ’.... :)

Wednesday, 30 November 2016

ಸುಂದರ ಸಮರಸದ ಬಾಳ್ವೆಗೆ ರೂಮಿಯವರ 35 ನುಡಿಮುತ್ತುಗಳು..

"ಒಲವಿಗರು ಕೊನೆಗೆಲ್ಲೋ ಸೇರುವುದಿಲ್ಲ, ಮೊದಲಿಂದ ಒಬ್ಬರಲ್ಲೊಬ್ಬರಿರುತ್ತಾರೆ." ಎಂದು ಹೇಳಿದ ರೂಮಿಯವರ ಪೂರ್ಣ ಹೆಸರು ಜಲಾಲ್ ಅದ್-ದೀನ್ ಮಹಮ್ಮದ್ ಬಾಲ್ಖಿ (30 ಸೆಪ್ಟೆಂಬರ್ 1207 - 17 ಡಿಸೆಂಬರ್ 1273 ) ಜಲಾಲ್ ಅದ್-ದೀನ್ ಮಹಮ್ಮದ್ ರೂಮಿ ಅಥವಾ ‘ರೂಮಿ’ ಎಂದೇ ಹೆಚ್ಚು ಜನಪ್ರಿಯರಾಗಿರುವ ಇವರು ಕ್ರಿ.ಶ.13ನೇ ಶತಮಾನದ ಪರ್ಷಿಯದ ಕವಿ, ನ್ಯಾಯಾಧೀಶ, ತತ್ವಶಾಸ್ತ್ರಜ್ಞ, ಮತ್ತು ಸೂಫಿ ಮಿಸ್ಟಿಕ್. ಇರಾನಿಯನ್ನರು,ಟರ್ಕೀ ಜನರು, ಆಫ್ಘನ್ನರು, ತಾಜಿಕ್ ಜನರು, ಮತ್ತು ಇತರೆ ಮಧ್ಯ ಏಷ್ಯದ ಮುಸ್ಲಿಮರು ಅಷ್ಟೇ ಅಲ್ಲದೆ ಭಾರತೀಯ ಉಪಖಂಡದ ಮುಸ್ಲಿಮರು ಇವರ ಆಧ್ಯಾತ್ಮಿಕ ವಿಚಾರಧಾರೆಯನ್ನು ಕಳೆದ ಏಳು ಶತಮಾನಗಳ ಅವಧಿಯಲ್ಲಿ ಮೆಚ್ಚಿಕೊಂಡಿದ್ದಾರೆ. ರೂಮಿಯವರ ಮಹತ್ವವು ರಾಷ್ಟ್ರೀಯ ಮತ್ತು ಜನಾಂಗೀಯ ಗಡಿಗಳನ್ನು ಮೀರುವಂಥದು ಎಂದು ಪರಿಗಣಿಸಲಾಗಿದೆ. ಅವರ ಕವಿತೆಗಳನ್ನು ವಿಶ್ವದ ಅನೇಕ ಭಾಷೆಗಳಲ್ಲಿ ವಿವಿಧ ಶೈಲಿಗಳಲ್ಲಿ ಭಾಷಾಂತರಿಸಲಾಗಿದೆ. 2007 ರಲ್ಲಿ ಅವರನ್ನು "ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯ ಕವಿ." ಎಂದು ಬಣ್ಣಿಸಲಾಯಿತು.

ಅವರ 35 ಚಿಕ್ಕ ಕವಿತೆಗಳು ಇಲ್ಲಿವೆ, ಓದಿ, ಹಂಚಿಕೊಳ್ಳಿ!

1. ನನ್ನ ಮಾತು ಹಡಗಾದರೆ ಅದರ ಹುರುಳು ಇಡೀ ಕಡಲು. ಬಾ, ಬಗೆಯ ಅಂತರಾಳಕ್ಕೆ ಕರೆದೊಯ್ಯುತ್ತೇನೆ.

2. ನಿನ್ನೆ ಮುಗಿಯಿತು ಅದರ ಕತೆಯೊಡನೆ. ಇಂದು ಬಾಳಬೇಕು ಹೊಸ ಕತೆಯೊಳಗೆ.

3. ಹಿರಿಮೆಯ ನೇಸರ ನಾನು. ಒಡಲಲ್ಲಿ ಮುತ್ತುಗಳಿರುವ ಕಡಲು ನಾನು. ನನ್ನೆದೆಯಲ್ಲಿ ನಾಕದ ಪೆಂಪಿದೆ.

4. ದೀಪವಾಗು, ದೋಣಿಯಾಗು, ಇಲ್ಲದಿದ್ದರೇಣಿಯಾಗು. ಯಾರದಾದರೂ ಬಗೆಯನ್ನು ಮಾಯಿಸು. ಕುರುಬನಂತೆ ಮನೆ ಬಿಟ್ಟು ಹೊರಡು.

5. ಮಾತಿಗೆಟಕದ ಸೋಜಿಗಗಳನು ಎದೆಯಿಂದ ಕೇಳು.

6. ಸುಮ್ಮನಿದ್ದಾಗ ನನ್ನೊಳಗೆ ಗುಡುಗು ಅವಿತಿರುತ್ತದೆ.

7. ನೀ ನನಗೆ ಕೊಡುವುದನ್ನು ಬಗೆಗಣ್ಣಿಗೆ ಎಂದೂ ಬಗೆಯಲಾಗಿಲ್ಲ.

8. ನೀ ಪಡುತ್ತಿರುವ ಈ ನೋವುಗಳು ಓಲೆಗಳು. ಕೇಳಿಸಿಕೊ.

9. ನಿನ್ನೆ ನಾನು ತಿಳುವಳಿಕಸ್ತನಾಗಿ ಜಗವನ್ನೆ ಮಾರ‍್ಪಡಿಸಬೇಕೆಂದಿದ್ದೆ. ಇಂದು ಅರಿಗನಾಗಿ ನಾನೇ ಮಾರ‍್ಪಡುತ್ತಿದ್ದೇನೆ.

10. ಬಯಸುವುದು, ಮಾಡುವುದು, ಬೇಡುವುದು, ನಿನ್ನಿಂದ ದೂರ ಮಾಡುವುದೆಲ್ಲವನು ದೂರ ಮಾಡು ನನ್ನೊಲವೇ.

11. ಕಾಣದಷ್ಟೆತ್ತರದ ಜಾಗದ ಮೇಲೆ ನೀ ಕಣ್ಣಿಡು.

12. ತಿಳುವಳಿಕೆ ನಾವು ತಕ್ಕವರಲ್ಲವೆನ್ನುತ್ತಿದೆ; ಒಲವು ತಕ್ಕವರೆನ್ನುತ್ತಿದೆ; ನನ್ನ ಬದುಕು ಇವೆರಡರ ನಡುವೆ ಹರಿಯುತ್ತಿದೆ.

13. ಬೆಳಗಿನಲಿ ನಿನ್ನ ಹೊಗಳಿದೆ... ತಿಳಿಯದೆ ಇರುಳಿನಲಿ ನಿನ್ನೊಡನಿದ್ದೆ... ತಿಳಿಯದೆ ನಾನು ನಾನೆಂದುಕೊಂಡಿದ್ದೆ... ಆದರೆ ನೀನಾಗಿದ್ದೆ... ತಿಳಿಯದೆ.

14. ನನ್ನ ಬದುಕಿನ ತಿರುಳಿಷ್ಟೆ: ಸರಕಾಗಿದ್ದೆ; ಅಡುಗೆ ಮಾಡಲ್ಪಟ್ಟು ಪಳಗಿದೆ; ಒಲವಿನಲ್ಲಿ ಸುಟ್ಟೆ.

15. ನಿನ್ನ ಆತ್ಮ ನನಗೆಷ್ಟು ಹತ್ತಿರವೆಂದರೆ ನೀ ಯೋಚಿಸಿದ್ದೆಲ್ಲ ನನ್ನ ಮನಸ್ಸಿನಿಂದ ಹಾದುಹೋಗುತ್ತದೆ.

16. ಹಾಯ್ತನದಿಂದ ಓಡು, ಜೋಕೆಯಾಗಿರುವುದನ್ನು ಮರೆ, ಬದುಕಲು ಹೆದರಿಕೆಯೆಲ್ಲಾಗುವುದೋ ಅಲ್ಲಿ ಬದುಕು, ಗಳಿಸಿರುವ ಹೆಸರನ್ನು ಸುಟ್ಟಿಹಾಕಿ ಕೆಟ್ಟ ಹೆಸರನ್ನು ಗಳಿಸು. ಮುನ್ನೆಚ್ಚರದಿಂದ ಎಲ್ಲವನ್ನೂ ಯೋಚಿಸಿದ್ದು ಮಾಡಿದ್ದು ಸಾಕು, ಇನ್ನು ಹುಚ್ಚನಾಗು.

17. ನಿನ್ನ ಅಂತರಾತ್ಮವನ್ನು ಮದುವೆಯಾಗು. ಅದೇ ದಾರಿ.

18. ಇರಬೇಕೋ ಇರಬೇಡವೋ ಎಂಬ ಗೊಂದಲವೆನಗಿಲ್ಲ. ಎರಡು ಲೋಕಗಳಿಂದಲೂ ತಪ್ಪಿಸಿಕೊಳ್ಳುವುದು ಕೆಚ್ಚೆದೆಯ ಗುರುತಲ್ಲ. ಎನ್ನೊಳಗಡಗಿರುವ ಬೆರಗುಗಳನು ತಿಳಿಯದೆ ಹೋಗುವುದು ಹುಚ್ಚಲ್ಲವಾದರೆ ಮತ್ತಾವುದು?

19. ಬಯಕೆಯ ಗದ್ದಲದಲಿ ನಿನ್ನೊಲವು ಎದೆಯಲಡಗಿರುವುದ ತಿಳಿಯೆ. ನಿಲ್ಲಿಸು ಆ ಗದ್ದಲವನು! ಮೌನದಲಿ ಅವನ ಮಾತು ಕೇಳದಿರದು.

20. ನಾ ತೆರೆದುಕೊಳ್ಳಲು ನೀ ತೆರೆದುಕೊ. ನನ್ನ ಪ್ರೇರಣೆಯನ್ನು ಕಂಡುಕೊಳ್ಳಲು ನಿನ್ನದನ್ನು ತಾ.

21. ನಿನ್ನ ಬೆಳಕಲಿ ಒಲವನು ಕಲಿತೆ, ನಿನ್ನಂದದಲಿ ಹಾಡುವುದ ಕಲಿತೆ. ಎನ್ನೆದೆಯೊಳಗೆ ನೀ ಕುಣಿಯುವೆ - ಯಾರಿಗೂ ಕಾಣದಂತೆ.

22. ನನಗೆ ಹೆಚ್ಚಿಗೆಯೇನು ಗೊತ್ತಿಲ್ಲ. ಒಲವನ್ನು ಕುಡಿದು ಮತ್ತೇರಿದೆಯಷ್ಟೆ.

23. ಹತ್ತಿರವಾದಷ್ಟೂ ನಾನೆಷ್ಟು ದೂರವೆಂಬ ಅರಿವು.

24. ಸರಿ-ತಪ್ಪುಗಳಾಚೆಗೊಂದು ಬಯಲಿದೆ. ನಾ ನಿನಗಲ್ಲಿ ಸಿಗುತ್ತೇನೆ.

25. ಒಳ್ಳೆಯ ಗೆಳೆಯನಿರೆ ಕನ್ನಡಿಯೇಕೆ?

26. ಹುಣ್ಣೆಂಬುದು ಬೆಳಕು ಒಳಹೊಕ್ಕುವ ಕಿಂಡಿಯಯ್ಯ.

27. ಬೀಳುಗೆಯಾಯಿತು. ಈಗೆನ್ನ ಏಳಿಗೆಯ ನೋಡಿ.

28. ಬಾನನ್ನು ಕರುಳಿನಿಂದ ಮಾತ್ರ ಮುಟ್ಟಬಲ್ಲೆ.

29. ನಿನ್ನ ನಿಜವಾದ ಒಲವಿನ ಹೆಚ್ಚಿನ ಸೆಳೆತಕ್ಕೆ ಸದ್ದಿಲ್ಲದೆ ಒಳಗಾಗು.

30. ಇದ್ದಂತೆ ಕಾಣು ಇಲ್ಲವೇ ಕಂಡಂತಿರು.

31. ಒಲವಿಗರು ಕೊನೆಗೆಲ್ಲೋ ಸೇರುವುದಿಲ್ಲ, ಮೊದಲಿಂದ ಒಬ್ಬರಲ್ಲೊಬ್ಬರಿರುತ್ತಾರೆ.

32. ನೀರಿನ ಅಲೆಗಳು ನಿಲ್ಲಲಿ, ನಿನ್ನೊಡಲಿನ ಚಂದ್ರ ನಕ್ಷತ್ರಗಳನ್ನು ಕಾಣುವೆಯಂತೆ.

33. ಹುಟ್ಟಿನಿಂದ ರೆಕ್ಕೆಯಿದ್ದು ತೆವಳುವ ಬಾಳೇಕೆ?

34. ನಿನ್ನ ತಿಳುವಳಿಕೆಯನ್ನು ಮಾರಿ ಸೋಜಿಗವನ್ನು ಕೊಂಡುಕೊ.

35. ಉಜ್ಜಿದಾಗೆಲ್ಲ ಸಿಟ್ಟಾದರೆ ನಿನ್ನ ಹೊಳೆಸುವುದು ಹೇಗೆ?

ಮಾಹಿತಿ: ವಿಕಿಪೀಡಿಯ.
ಚಿತ್ರಗಳು, ಕವಿತೆಗಳು: rumikannada.

Tuesday, 1 December 2015

ಪ್ರೇಮ ಕಥೆ-Love story- कहानी प्यार की

ಜೀವನದಲ್ಲಿ ಒಮ್ಮೊಮ್ಮೆ ನಮ್ಮ ಪ್ರೀತಿ ಪಾತ್ರರು ಅನಿರೀಕ್ಷಿತವಾಗಿ ನಾವು ಅಪೇಕ್ಷಿಸಿದ್ದಕ್ಕಿಂಲೂ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಸುತ್ತಾರೆ.. ಈ ಸಮಯವನ್ನೇ ಜೀವನದ ಮಹತ್ತರ ತಿರುವು ಎನ್ನಬಹುದು. ಇಂತಹ ಅಮೂಲ್ಯ ಸಮಯಕ್ಕಾಗಿ ತಾಳ್ಮೆಯಿಂದ ಕಾಯುವುದನ್ನು ಕಲಿತರೆ ಅತ್ಯುತ್ತಮ ಪ್ರೇಮ ಕಥೆ ನಮ್ಮದಾಗುತ್ತದೆ..��

Sunday, 8 November 2015

ಹಾಗೆ ಸುಮ್ಮನೆ ಒಂದು ವರುಷ.. :)

    "ಹಾಗೆ ಸುಮ್ಮನೆ" ಮನದ ಕದವ ತೆರೆದು ಇಣುಕುವ ಭಾವನೆಗಳ ಕೂಡಿಡುವ ಪ್ರಯತ್ನದಲ್ಲಿ ತೋಚಿದ್ದು ಗೀಚಿಡಲು ವರ್ಷದ ಹಿಂದೆ ಬ್ಲಾಗೊಂದನು ಆರಂಭಿಸಿದೆ..ಈ ಬ್ಲಾಗಿಗೆ ಇಂದು ವರುಷದ ಸಂಭ್ರಮ..
    ಆರಂಭ ಶೂರಳಂತೆ ಬಿಡುವಿನ ಸಮಯದಲ್ಲಿ ಕೆಲ ಬರಹಗಳನ್ನು ಗೀಚಿ ಸುಮ್ಮನಾದ ನನಗೆ ಬ್ಲಾಗಿನ ಮೌನರಾಗಕ್ಕೆ ಕಿವಿಗೊಟ್ಟಾಗ ಅರಿವಿಲ್ಲವದಂತೆ ಅರಿವಿಗೆ ಬಂದದ್ದು ವರುಷವೊಂದು ಸದ್ದಿಲ್ಲದೆ ಉರುಳಿದ್ದು..ಸಮಯ ಸಾಗುವ ಪರಿಯ ತಡೆಯುವ ಗತಿಯ ನಾ ಕಾಣೆಯಾದರೂ ಕಳೆವ  ಕ್ಷಣಗಳ ಸ್ವರಗಳನ್ನು ಕೂಡಿಡುವ ಪ್ರಯತ್ನಕ್ಕೆ ಪ್ರೇರೇಪಿಸಿ ಹಾರೈಸಿದ ಎಲ್ಲರಿಗೂ loads of love�� and thank you��
ನಿಮ್ಮೆಲ್ಲರ ಪ್ರೀತಿ ಸದಾ ಇರಲಿ..ಅನಿಸಿಕೆ ಬರೆಯಲು ಮರೆಯದಿರಿ..��