Saturday, 17 October 2015

ಕನಸಿನ ಪ್ರೀತಿಯ ಸಾಲುಗಳು..

    ಅಚ್ಚಿ ನಿನ್ನ್ಮದುವೆ ಯಾವಾಗ ನೀ ಹಿಂಗೆ ಅದು ಬೇಡ ಇದು ಬೇಡ ಅಂಥ ಕಾಲ ನೂಕ್ತಿದ್ರೆ ಹೇಗೆ? Life is not a fairy tale ಸುಮ್ನೆ ಕನಸಿನ ಗೋಪುರ ಕಟ್ಬೇಡ ಅಂತ advice ಮಾಡಿದ ಸ್ನೇಹಿತೆಯೊಡನೆ ವಾದ-ವಾಗ್ವಾದ ಮುಗಿದ ನಂತರ ಹೇಗಿರಬೇಕು ನಿನ್ನ ಕನಸಿನ ಹುಡುಗ ಎಂದವಳು ಕೇಳಿದ ಪ್ರಶ್ನೆಗೆ ಈ ಸರಿ ರಾತ್ರಿಲಿ ಉತ್ತರ ನೀಡ್ಲೇಬೇಕಾ?ಉತ್ತರ ಕೇಳಿದ್ರೆ ನೀ ಬೆಚ್ಚಿ ಬೀಳ್ತಿ, ಇವಾಗ ಸುಮ್ನೆ ಮಲಗು ಟೈಮ್ ಸಿಕ್ಕಾಗ ನಾನೇ ನನ್ನ dream boy,dream life ಬಗ್ಗೆ  ಬ್ಲಾಗನಲ್ಲಿ ಬರೆಯುವೆ ಓದ್ಕೋ ಎಂದು ಹೇಳಿ ಸಾಂಗ್ಸ್ ಕೇಳ್ತಾ ನಿದ್ರೆಗೆ ಜಾರ ಹೊರಟ ನನ್ನ ಮನದ ಕಿಟಕಿಯಿಂದ ಇಣುಕಿದ್ದು ನನ್ನ ಕನಸಿನ ಹುಡುಗ.. ಕಾಕತಾಳೀಯವೋ ಏನೋ ಎಂಬಂತೆ ಅಂದು ಮೊಬೈಲ್ ಪ್ಲೇ ಲಿಸ್ಟನಲ್ಲಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುದ್ದವು. ಅವನ್ಯಾರೋ ಒಂದಿನ ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ ನನಗೆ ನಾನೇ..ಆಲೋಚನೆ ಆರಾಧನೆ ಎಲ್ಲ ಅವನದ್ದೇ ಆಗಿತ್ತು ಅಂದು.ಆ ಕನಸುಗಳಿಗೂ ಬಹುಶಃ ಒಂದು ಪರಿಧಿ,ಮಿತಿ, ವ್ಯಾಪ್ತಿ ಎಂಬುದಿಲ್ಲ ಮತ್ತು ಪಿಟೀಲು ಕುಯ್ಯೋದನ್ನು ನಂಗೆ ಹೇಳ್ಕೊಡ್ಬೇಕಿಲ್ಲ. ಹಾಗೆ ಸುಮ್ಮನೆ ಬ್ಲಾಗಿನ ಡ್ರಾಫ್ಟ್‌ ಬಾಕ್ಸಿನಲ್ಲಿ ಅವಿತು ಕುಳಿತ ಆ ದಿನ ಗೀಚಿಟ್ಟ ನನ್ನ ಕನಸ ಸಾಲುಗಳಿಗೆ ರೆಕ್ಕೆ ಬಂದು ನಿರೀಕ್ಷೆಯಂತೆ ಸಿಕ್ಕ ನನ್ನ ಪ್ರೀತಿಯ ಯಶದ ಮನದ ವಿಳಾಸಕ್ಕೆ ಹಾರ ಹೊರಟಿವೆ.
   ಅವನೆಂದರೆ ನನ್ನ ಪ್ರಪಂಚವಾಗಿರ್ಬೇಕು..ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು ಹಾಗೇ ಅವನೂ ಕೂಡ..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಬದುಕು ಭಾವಗೀತೆಯಾಗ್ಬೇಕು..ಭಾವಜೀವಿ ನಾನಾದರೆ ಅದರ ಭಾವನೆ ಅವನಾಗಿರಬೇಕು..ನನ್ನೊಲವ ದಾರಿಯಲಿ ಬರಬೇಕೆನ್ನುವ ಆ ನನ್ನ ಪ್ರೀತಿಯ ಹುಡುಗನೊಡನೆ ಹಾಕುವ ಪ್ರತೀ ಹೆಜ್ಜೆಯ ಗುರುತುಗಳಲ್ಲಿ ಪ್ರೀತಿಯ ಕನಸುಗಳಿರಬೇಕು. ಕೈ ಹಿಡಿದು ಸಾಗುವ ಬಾಳ ಪಯಣದ ಕಂಗಳಿಗೆ ಕಣ್ರೆಪ್ಪೆಯಂತೆ ಅವನ ಕಾವಲಿರಬೇಕು..ಆ ಮನಸು ಕನಸುಗಳ ಪಿಸುಮಾತುಗಳಿಗೆ ಪ್ರೀತಿ ದನಿಯಾಗಬೇಕು. ವಾತ್ಸಲ್ಯಭರಿತ ಬದುಕ ಕಟ್ಟಬೇಕು.. ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಅವನೇ ಹೆಸರಾಗಬೇಕು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಸನಿಹ ಸುಳಿಯಲಾರದು.. ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ, ಅದೇ ನಗುವಿನ ಪ್ರತಿಫಲನ ನಮ್ಮ ಪ್ರೀತಿಯನ್ನೇ ನೆನಪಿಸುವಂತಿದ್ದರೆ ನಾ ಎಂದಿಗೂ ನಗುತ್ತಲೇ ಇರುವೆ.. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನ್ನೆಲ್ಲ ಒಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ನಲ್ಲಿ ಕಟ್ಟಿಸಿಡಬೇಕು..ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು, ಅವನಿಗೆ ನಾನೆಂಬ ಸೆಕ್ಯೂರ್ ಫೀಲ್ ಇದ್ರೆ ಸಾಕು
ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ಇನ್ನೇನು ಬೇಕು..ಹುಣ್ಣಿಮೆ ಬೆಳದಿಂಗಳಲ್ಲಿ ಅವನ ಮಡಿಲಲ್ಲಿ ಮಲಗಿ ಇಬ್ಬರೂ ಸೇರಿ ಚಂದ್ರನ ಅಂಗಳದಿ ಮೂಡಿರೋ ಚುಕ್ಕಿಗಳ ಲೆಕ್ಕ ಹಾಕಬೇಕು. ಮರೆಯಾಗದೇ ಇರುವ ಹುಚ್ಚು ಕನಸುಗಳಿಗೆ ನನಸೆಂಬ ಗೇಟ್ ಪಾಸ್ ಕೊಟ್ಟರೆ ಬದುಕು ಅದೆಷ್ಟು ಸುಂದರ..
   ಸಂಬಂಧಗಳು ಭದ್ರವಾಗಿರಬೇಕು.ಬಾಂಧವ್ಯದ ಬೆಸುಗೆಯಲ್ಲಿ ನನ್ನದೊಂದು ಪ್ರೀತಿಯ ಪಾಲಿದ್ದರೆ ಅವನದೊಂದಿರಬೇಕು.. ಆಶಿರ್ವಾದ, ಹಾರೈಕೆಗಳ ಜೋಗುಳದ ಹಾಡಿನಲ್ಲಿ ಒಂದು ಸ್ವರ ನನ್ನದಾದರೆ ಮತ್ತೊಂದು ಅವನದಾಗಿರಬೇಕು..ಸುಂದರ ಬಾಳ ಪಯಣದಲ್ಲಿ ನನ್ನದೊಂದು ಹೆಜ್ಜೆಯಾದರೆ ಅವನದೊಂದಿರಬೇಕು.. ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಹೆಚ್ಚು ಹೆಚ್ಚು ಪ್ರೀತಿಗಳಿಂದ ಪ್ರೀತಿಯಲಿ ತೇಲಿಸುವಂತಿರಬೇಕು. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ದಿನ ಆರಂಭವಾಗಬೇಕು..ಭಟ್ಟರ ಹಾಡಿನ ನನ್ನ favourite ಸಾಲಿನ ಪ್ರೀತಿಯಂತೆ ಅವನಿರದ ಯಾವ ಸ್ವಪ್ನವೂ ಕೂಡ ಈ ನನ್ನ ಕಂಗಳಿಗೆ ಬೇಡವೇ ಬೇಡ..ಏನೇ ಆದರೂ ನಾನೆಲ್ಲೇ ಹೋದರೂನು ಅವನ ಜೀವ ನನ್ನಲ್ಲೇ ಇರುವಂತೆ ಅವ ನನ್ನ ಹಿಂಬಾಲಿಸಬೇಕು.ಖುಷಿಯಲ್ಲಿ ಅವನನ್ನು ಬಿಗಿದಪ್ಪಿ ನಾ ಬಿಕ್ಕಿ ಮನಸಾರೆ ಅತ್ತುಬಿಡಬೇಕು ಹೀಗೆ ಅಚ್ಚು ಮೆಚ್ಚಾಗಿರುವ ನನ್ನ ಭಾವ ಸರಿತೆಯಲ್ಲಿ ಅಚ್ಚಿನ ದೋಷಗಳು ಎಂದಿಗೂ ಮೈದೋರದೆ ಬಾಳು ಜೀವನದಿಯಾಗಿ ಹರಿಯಬೇಕು.
   ನಾ ಹಣತೆ ಹಚ್ಚಿದರೆ ಅದರ ಬೆಳಕು ಎಂದೆಂದಿಗೂ ಅವನಾಗಬೇಕು.. ಬಾನಂಗಳದಿ ಮೂಡಿದ ಸೂರ್ಯೋದಯ ಸೂರ್ಯಾಸ್ತದ ಸುಂದರ ಚಿತ್ತಾರ, ತುಂತುರು ಮಳೆಯ ಸಿಂಚನವ ಸವಿಯಬೇಕು ಬಿಸಿ ಬಿಸಿ ಕಾಫಿಯೊಡನೆ ಇಬ್ಬರೂ. ಖಾಲಿಯಾಗದ ಒಂದಷ್ಟು ಭಾವನೆಗಳ ಲೋಕದಲಿ ನಾನು ಅವನು ಮಾತ್ರ ಇರಬೇಕು ಬದುಕಿನಲ್ಲಿಯ ಬದುಕು ನಾವಾಗಬೇಕು..
   ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಮಾತುಗಳು ಕೇಳಿಸುತ್ತಿರುವಂತೆ ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ನನ್ನ ಪ್ರತೀ ಮೌನದಲ್ಲೂ ಅವನ ಧ್ವನಿ ಹೊರಹೊಮ್ಮಿಸಬೇಕು. ಸಮಯ ಸಿಕ್ಕಾಗಲೆಲ್ಲ ಔಟಿಂಗ್ ನೆವದಲ್ಲಿ ಅಲೆಮಾರಿಗಳಂತೆ ಊರೂರು ಸುತ್ತಬೇಕು.ಕಣ್ಣಿನ ಕ್ಯಾಮರಾದಲ್ಲಿ ಮತ್ತು ಕ್ಯಾಮರಾದ ಕಣ್ಣಲ್ಲಿ ತೆಗೆಯುವ ಪ್ರತೀ ಫೋಟೋವನ್ನು ಹೃದಯದಲಿ ಕಟ್ಟಿಸಿಡಬೇಕು. ಸಮುದ್ರದ ದಡದಲ್ಲಿ ನಾ ಕಟ್ಟುವ ಮರಳ ಪುಟ್ಟ ಗುಬ್ಬಚ್ಚಿ ಗೂಡಿಗೆ ಅವ ಗುಬ್ಬಿಯಾದರೆ ನಾ ಗುಬ್ಬಿಮರಿಯಾಗಬೇಕು.. ನಮ್ಮ ಪ್ರೀತಿ ನೋಡಿ ಹೊಟ್ಟೆಕಿಚ್ಚಿನಿಂದ ಅಬ್ಬರಿಸುವ ಕಡಲ ಸೂರ್ಯಾಸ್ತಕ್ಕೆ ಏಕಾಂತದಲ್ಲಿ ಇಬ್ಬರೂ ಸಾಕ್ಷಿಯಾಗಬೇಕು. ಅಲೆಗಳಾಗಿ ಬರುವ ಖುಷಿಯಲ್ಲೂ, ಬೇಸರದ ಬೇಗುದಿಯಲ್ಲೂ ಆಸರೆಯಾಗುತ್ತ ಸೊಗಸಾದ ಮೌನದ ಗಳಿಗೆಯಲ್ಲೂ ಪ್ರೀತಿಯ ಕನವರಿಕೆ ಪುಟದ ಮರೆಯಲ್ಲಿ ಇಣುಕುತ್ತಿರಬೇಕು.
ಬೆಳದಿಂಗಳಲಿ ಕೈಹಿಡಿದು ಒಬ್ಬರಿಗೊಬ್ಬರು ಕೈ ತುತ್ತ ತಿನ್ನಿಸುತ್ತ ಮತ್ತೊಮ್ಮೆ ಮಗದೊಮ್ಮೆ ನೂರು ವರುಷ ಜೊತೆ ಜೊತೆಯಲಿ ಕಳೆಯಬೇಕು ..
     ಅವನ್ಯಾರೋ ಏನ್ ಮಾಡ್ತಿದ್ದಾನೋ ಆ ಹೊತ್ತಿಗೆ ಅಂತೆಲ್ಲ ಎಷ್ಟೋ ಸಲ ಯೋಚಿಸಿದ್ದೆ..ನನ್ನ ಪ್ರೀತಿಯನ್ನೆಲ್ಲ ಜತನದಿಂದ ಹೃದಯದ ಪುಟ್ಟ ಗೂಡಿನಲ್ಲಿ ಜೋಪಾನವಾಗಿ ಕೂಡಿಟ್ಟಿರುವೆ. ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದ, ಗೊತ್ತಿಲ್ಲದ ನನ್ನ ಪ್ರೀತಿಯ ಹುಡುಗನಿಗೆ ಬರೆದು ಭದ್ರವಾಗಿ ಇರಿಸಿದ್ದೆ. ನಾ ಹೇಗೆ ಯೋಚಿಸ್ತಿನೋ ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸ್ತಾನೇನೋ.. ಭಾವನೆಗೆ ಬೇಕಿಲ್ಲ ರೂಪ ಬಣ್ಣ..ನಮ್ಮಿಬ್ಬರಲೂ ಅರ್ಥ ಮಾಡಿಕೊಳ್ಳುವ ಮನಸ್ಸೊಂದಿದ್ದರೆ ನನ್ನ ಹೃದಯದಲಿ ಎಂದೂ ಗುನುಗುನಿಸುವ ಹಾಡು ಅವನದ್ದೇ ಹಾಗೇ ಅವನ ಹೃದಯದಲಿ ಗುನುಗುನಿಸುವ ಹಾಡು ನಾನಾಗಿರಬೇಕು. ನನ್ನ ಮನ ಯೋಚಿಸುವ ಪ್ರತೀ ಕ್ಷಣವೂ ಅವನೇ ಆಗಿರಬೇಕು..ನಮ್ಮ ಬಗೆಗಿನ ನಮ್ಮ ಭಾವನೆಯಲ್ಲಿಯೇ ಬದುಕು ಕಟ್ಟೋಣ.. ಡಿಸ್ನಿ ಲ್ಯಾಂಡಿನ ಫೇರಿಟೆಲ್ ಮೂವಿಗಳಂತೆ ಲೈಫ್ "Happily ever after" ಅನ್ನೋ ತರಹ ಇರಬೇಕು.
   ನಾ ಕಂಡ ಕನಸುಗಳೆಂಬ ನಕ್ಷತ್ರಗಳ ರಾಶಿ ರಾಶಿಗಳೆಷ್ಟೋ..ಅವುಗಳಲ್ಲಿ ನನಸಾಗುವುದೆಷ್ಟೋ.. ಒಂದೂ ತಿಳಿದಿಲ್ಲ.. ಆದರೆ ಅವನ ಬಗೆಗಿರುವ ಭರವಸೆಯೊಂದೇ ಬದುಕಿಗೆ ಚಿರಕಾಲ ಜಿನುಗುತ್ತಿರುವ ನಲುಮೆಯ ಸ್ಪೂರ್ತಿ..

#ಕನಸುಗಳು copyrighted & ಹಕ್ಕುದಾರನಿಗೆ ಪ್ರೀತಿಯಿಂದ dedicated..

Saturday, 5 September 2015

ಜಾರಿಯಲ್ಲಿರಲಿ ಪ್ರೀತಿ ಅನವರತ ಇದೇ ರೀತಿ..:)

    ಅದೊಂದಿನ ತುಂಬಾ ದಿನಗಳ ನಂತರ ನನ್ನ ಫೋನಿನ ಪ್ಲೇ ಲಿಸ್ಟ್ನಲ್ಲಿ  ಪ್ಲೇ ಆಗ್ತಾ ಇದ್ದ ಹಾಡಿನ ಸಾಲದು: 'ನೆನಪಿನ ಚಿಲಕ ಸರಿವ ಸದ್ದಿಗೆ was there a sound knock knock. . whose at the door knock knock. . could it be you knock knock. .'
ಹಾಡು  ಸಾಗಿದಂತೆ ನೆನಪಿನ ನವಿಲು ಗರಿ ಮನದಂಚಲಿ ಗರಿಗೆದರಿತು. .
     ಮನೆಗೆ ಹೋದಾಗ್ಲೆಲ್ಲ ಹಾಗೆ,ವಾಪಸ್ ಬರಬೇಕೆಂದು ಅನಿಸೋದೇ ಇಲ್ಲ . ಆಕಾಶದಂತಿರೋ ಅಪ್ಪ- ಅಮ್ಮ, ಸ್ನೇಹಿತರಿಗಿಂತಲೂ ಹೆಚ್ಚಿರುವ ತಂಗಿಯರು,ಅಕ್ಕ-ಅಣ್ಣಂದಿರು, ಮುಗ್ದ ದೊಡ್ಡಮ್ಮ ದೊಡ್ಡಪ್ಪ, ಪುಟಾಣಿ ಸಮನ್ವಿತಾ ಜೊತೆ ಓಡಾಡಿಕೊಂಡು ಇರಬೇಕು ಎಂದೆನಿಸುತ್ತದೆ .
     ಅದ್ಯಾಕೆ ಹಾಗಾಗತ್ತೋ ಗೊತ್ತಿಲ್ಲ ಪ್ರತಿಸಲ ಮನೆಯಿಂದ ಹೊರಡುವ ಹಿಂದಿನ ದಿನ ನನ್ನ ರೂಮು,ನನ್ನ ಮನೆ, ನನ್ನೂರು, ಅದೆಲ್ಲವನ್ನು miss ಮಾಡ್ತೇನೆ . ಕೊನೆಗೆ ನನ್ನ ಡ್ರೆಸ್ಸಿಂಗ್ ಟೇಬಲ್,ಮಂಚ, PC ಎಲ್ಲವನ್ನೂ ಪ್ರೀತಿಯಿಂದ ಸವರಿ ಮನೆಯ ಟೆರೆಸ್ ಮೇಲೆ ಕುಳಿತು ಸಂಜೆಯ ಸುಂದರ ಹೊಂಬೆಳಕ ಆಕಾಶವನ್ನು ಬಿಸಿ ಬಿಸಿ ಕಾಫಿ ಸವಿಯುತ್ತ ನೋಡುತ್ತಿದ್ದರೆ ಮನದೊಳಗೆ ಯೋಚನೆಗಳ ಮೆರವಣಿಗೆ ಹೊರಡುತ್ತವೆ . ಕಣ್ಣೀರು ತುಂಬಿ ಆಗಸ ಮಸುಕಾಗಿ  ಕಂಡಾಗಲೇ ಗೊತ್ತಾಗೋದು ಆಗಸದಲ್ಲಿ ನಕ್ಷತ್ರಗಳು ನನ್ನ ಕಣ್ಣಲ್ಲಿ ಹನಿಗಳು ಮೂಡಿವೆ ಎಂದು.
     'ಭಾವನೆಗಳ ಮೂಕ ರೂಪವೇ ಈ ಕಣ್ಣ ಹನಿಗಳು. .'! ಶಬ್ದಗಳು ಹೇಳದ ಮಾತುಗಳನ್ನು ಹನಿ ಕಣ್ಣೀರು ಹೇಳುತ್ತದೆ. ನಾಳೆ ಇದೇ ಆಗಸವನ್ನು ಅಲ್ಲಿ ನೋಡಬೇಕಲ್ಲ ಎಂಬ ಯೋಚನೆಗೆ ಕಣ್ಣೀರು ಕೆನ್ನೆಯನ್ನು ತೋಯಿಸಿಬಿಡುತ್ತದೆ. bag pack ಮಾಡಲಂತೂ ಮನಸೇ ಬರುವುದಿಲ್ಲ. ಪ್ರತಿ ಸಲವೂ ಹೊರಡುವಾಗ ಗಡಿಬಿಡಿಯಿಂದ bag pack  ಮಾಡೋದು ನೋಡಿ ಅಮ್ಮ ತಂಗಿಯರ ಗೊಣಗಾಟ ಶುರುವಾದಾಗ  ಏನೇನೋ ಯೋಚನೆ  ಮೂಡುತ್ತವೆ-ಅದ್ಯಾಕೆ ನಮ್ಮನೆ,ನಮ್ಮೂರು, ನನ್ ಫ್ಯಾಮಿಲಿ ಅಂದರೆ ಅಷ್ಟೊಂದು attachment ? ಪ್ರಶ್ನೆಯನ್ನು ಕೇಳಿ ನಾನೇ ಉತ್ತರವನ್ನು ನನಗೆ ತೋಚಿದ ರೀತಿಯಲ್ಲಿ ಇನ್ನೂ ಸ್ವಲ್ಪ ದಿನ ತಾನೆ PG ಮುಗಿದ ಮೇಲೆ ಮತ್ತೆ back to pavilion ಅಂತ ಹೇಳಿ ನಂಗೆ ನಾನೇ ಸಮಾಧಾನ ಮಾಡಿಕೊಳ್ತಿದ್ದೆ..
ಆದ್ರೆ ಈಗ???? God blessed me with my dream boy..He found me when I was looking for him..
     ಮದುವೆಯಾಗಿ ಪ್ರೀತಿಯ ಇನ್ನೊಂದು ಗೂಡು ಸೇರಿದ ಬಳಿಕ ನಾ ಬೆಳೆದ ಮನೆಯಂಗಳ, blessing ತರಹ ಇರುವ ಅಪ್ಪ-ಅಮ್ಮ, ಪುಟ್ಟ ತಂಗಿಯರು, ಆತ್ಮೀಯವಾಗಿ ಬರಮಾಡಿಕೊಂಡಂತೆ ಕಾಣುವ ನನ್ನ ರೂಮು, ನೆಟ್ಟಿ ಬೆಳೆಸಿದ ಹೂಗಿಡಗಳು,ಪಿತಾಂಬರ ವರ್ಣದ ದಿಗಂತ ಮತ್ತು ಅದರ ಬೆಳ್ಳಿ ಅಂಚಿನ ಮೋಡಗಳು, ಆ ಮೋಡಗಳಲ್ಲಿ ಕಟ್ಟಿಕೊಂಡ ಕನಸುಗಳು, ಮನೆ ಪಕ್ಕದಲ್ಲೇ ಇರೊ cricket ಸ್ಟೇಡಿಯಂ, ಬಾಲ್ಯದ ಗೆಳತಿ/ ಗೆಳೆಯರು, ಗುಡ್ಡದ ಸೂರ್ಯಾಸ್ತ , ಚಳಿಗಾಲದ ಇಬ್ಬನಿಯ ಬಿಂದುಗಳ ಹೊತ್ತ ಜೇಡರ ಬಲೆ, ರಕ್ತ ಸಂಬಂಧಗಳು .. ಇನ್ನೂ ಏನೇನೋ ..... ನೆನಪಾಗಿ ನನ್ನ ಸುಪ್ತ ಮನಸಿನ ಮೂಲೆಯೊಂದರಲ್ಲಿ ಅಡಗಿ ಕುಳಿತಿರುತ್ತವೆ . ಮನೆಯಿಂದ ಹೊರಡೋದು ಒಂದು ನೆಪವಾಗಿ ಕಾಡುತ್ತವೆ. . ಅದೇ ಎಲ್ಲವನ್ನೂ ಬಿಟ್ಟು ಹೊರಡಬೇಕಲ್ಲ ಎಂದು ಪ್ರತೀ ಬಾರಿ ಮೌನವನ್ನು ಅಪ್ಪುತ್ತೇನೆ, ದುಃಖ ಉಮ್ಮಳಿಸಿದಾಗ ಪಕ್ಕದಲ್ಲೇ ಕೂತಿರುವ ತಂಗಿಯರ common dialogue ಪ್ಲೇ ಆಗುತ್ತದೆ: 'hey mad ಯಾಕ್ ಅಳ್ತೀ??' ಕಾರಣ ಗೊತ್ತಿದ್ದೂ ಕೇಳುವ ಆ ಪ್ರಶ್ನೆಗೆ ತುಸು ಕೋಪದಿಂದಲೇ u will get to know when ur turn comes ಅಂತ ಹೇಳಿ ಅಲ್ಲಿಂದ ಎದ್ದು ಒಳ ನಡೆದಾಗ ಪುಟ್ಟ ತಂಗಿಯ ಕೀಟಲೆ ಶುರುವಾಗುತ್ತದೆ..
PG ದಿನಗಳಲ್ಲಿ bustandಗೆ ಬಿಡಲು ಬರುತ್ತಿದ್ದ ಅಪ್ಪನಿಗೆ ಟಾಟಾ ಹೇಳಿ ಬಸ್ ಏರಿ ಕುರುತ್ತಿದ್ದ ನನಗೆ ಊರನ್ನು ಎಲ್ಲೋ ಖಾಯಂ ಆಗಿ ಬಿಟ್ಟು ಹೋಗೋ ಭಾವನೆ ಆವರಿಸಿಬಿಡ್ತಿತ್ತು .! ಕಣ್ಣಲ್ಲಿ ಜೋಗ ನಯಾಗರ ಜಿನುಗಲು ರೆಡಿಯಾಗಿರುತ್ತಿತ್ತು. .
     ಪ್ರತೀ ಸಲ ಅಮ್ಮ ಅಪ್ಪ ನನ್ನ ಹೊಸ ಗೂಡಿಗೆ ಕಳುಹಿಸಲು ಬಂದಾಗ ಇಲ್ಲವೆ ಅವನು ನನ್ನ ಕರೆದುಕೊಂಡು ಹೋಗಲು ಬಂದಾಗ ಕಾರ್ ಹತ್ತಿ ಕುಳಿತಾಗ ಅದೆಲ್ಲಿಂದಲೋ ದುಃಖ ಉಮ್ಮಳಿಸಿ ಬಂದು ಭಾವನೆಗಳ ಸುಳಿಯಲ್ಲಿ ಸಿಕ್ಕಿ ಕಂಗಾಲಾಗುವ ಸ್ಥಿತಿ ವಿವರಿಸಿ ಹೇಳಲಸಾಧ್ಯ. 
     ಈ ಎಲ್ಲ ಭಾವಗಳ ನಡುವೆ ಮೂಕಸ್ಮಿತಳಾಗಿ ಯೋಚನಾ ಲಹರಿಯಲ್ಲಿ ಕಳೆದು ಹೋದಾಗ ನನ್ನ moible ರಿಂಗಣಿಸಿದಾಗಲೇ ಎಚ್ಚರವಾದದ್ದು .! 'Maa calling' ಎಂದು ತೋರಿಸುತ್ತಿತ್ತು .
ಅಮ್ಮನೊಡನೆ ಮಾತನಾಡಿ ಫೋನ್ ಡಿಸ್ಕನೆಕ್ಟ ಮಾಡಿದ ನಂತರ ನಾ ಪ್ರೀತಿಯಿಂದ teddy ಎಂದು ಕರೆಯುವ  ಪುಟ್ಟ ತಂಗಿಯಿಂದ message ಬಂದಿತ್ತು "missing u stupid..come soon and get something for me " ಮೆಸೇಜ್ ಓದಿದ ಬಳಿಕ ಕಣ್ಣೀರ ಸಿಂಚನವಾದ ಮೊಗದಲ್ಲಿ ನಗೆಯ ಹೂಮಳೆ!'
     ಜೀವನ ಅಂದ್ರೆ ಹೀಗೆ ಅಲ್ವಾ? ಊರು, ಅಪ್ಪ-ಅಮ್ಮ, ತಂಗಿಯರನ್ನ ನಾನು miss ಮಾಡೋವಂತೆಮಾಡಿ ನನ್ನ ಪ್ರೀತಿಯ ಪ್ರಪಂಚಕ್ಕೆ ಇನ್ನಷ್ಟು ಪ್ರೀತಿಯ ಮಳೆ ಸುರಿದು ಅಪೇಕ್ಷೆಯ ನಿರೀಕ್ಷೆಯಂತೆ ಸಿಕ್ಕ ಪ್ರೀತಿಯ ಯಶ ಜಾರಿಯಲ್ಲಿರಲಿ ಪ್ರೀತಿ ಅನವರತ ಇದೇ ರೀತಿ. . :)

Monday, 17 August 2015

ನೆನಪಿನ ನವಿಲು ಗರಿ. .


ಚಿಕ್ಕವಳಿದ್ದಾಗ ನನ್ನ ಆಪ್ತ ಸ್ನೇಹಿತೆಯೊಬ್ಬಳು ಹೇಳಿದ್ದಳು ನವಿಲು ಗರಿ ಪುಸ್ತಕದಲ್ಲಿ ಇಟ್ಟರೆ ಮರಿ ಹಾಕುತ್ತೆ ಅಂತ!! ಅವತ್ತೇ ನನ್ನ
ದೊಡ್ಡಪ್ಪನನ್ನು ಕಾಡಿ ಬೇಡಿ ದೇವಸ್ಥಾನದಲ್ಲಿದ್ದ ದೇವರ ನವಿಲು ಗರಿ ಬೆತ್ತದ ಒಂದು ಗರಿಯನ್ನು ತೆಗೆದುಕೊಂಡು ಗೋಕುಲಾಷ್ಟಮಿಯ ದಿನ ಪುಸ್ತಕದಲ್ಲಿ ಜೋಪಾನವಾಗಿ ಇಟ್ಟಿದ್ದೆ. ಇಂದಿಗೆ ಈ ನವಿರಾದ ನವಿಲು ಗರಿಗೆ 12 ವರ್ಷಗಳು.. ನವಿಲು ಗರಿ ಇನ್ನೂ ಮರಿ ಹಾಕೇ ಇಲ್ಲ.. ನವಿಲು ಗರಿ ಮರಿ ಹಾಕುತ್ತೆ ಅಂತ ಭ್ರಮಿಸಿದ ಮುಗ್ಧತೆಯ ಆ ಬಾಲ್ಯ ನೆನಪೇ ಸುಂದರ. .
ಆ ನೆನಪಿಗೆ ಇನ್ನೂ ಆ ಗರಿಯನ್ನು ಪುಸ್ತಕದಲ್ಲಿ ಇಟ್ಟು ಕಾಯುತ್ತಿರುವ ನನ್ನ ಬಾಲಿಶ ಮಧುರ. .
This post is dedicated to her..
Once again wish u many more happy returns of this day my
tweety Meghana Kulkarni
Loads of love on ur way..
# ನೆನಪಿನ_ನವಿಲುಗರಿ :)

Tuesday, 16 December 2014

ಎಂದೂ ಮರೆಯದ ಹಾಡು.....

  ಅದೊಂದು ಮಧ್ಯಾಹ್ನ ಕಣ್ಣಿಗೆ ಬಿದ್ದ ಮುದ್ದಾದ ಹಸು ಮತ್ತು ಕರುವನ್ನು ನೋಡಿದಾಗಿಂದ ಮನಸ್ಸು ಇಂದೆಕೋ ಬಾಲ್ಯದ ದಿನಗಳಿಗೆ ನೆಗೆಯುತ್ತಿದೆ. ಅಂಗನವಾಡಿಯಲ್ಲೋ ಒಂದನೆಯ ತರಗತಿಯ ಪಠ್ಯದಲ್ಲಿ ಇರಬೇಕು  "ಪುಣ್ಯಕೋಟಿ ಗೋವಿನ ಹಾಡು". ಆದರೆ ನಾನು ಮಾತ್ರ ಈ ಹಾಡನ್ನು ಶಾಲೆಗೆ ಸೇರುವ ಮುನ್ನವೇ ಅಪ್ಪನಿಂದ  ಕೇಳಲ್ಪಟ್ಟಿದ್ದೆ. ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು, ಯಾರು ಮರೆತರು ನಾ ಮಾತ್ರ ಮರೆಯದ ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಮಕ್ಕಳು ಓದಲೇಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಭಾವನಾತ್ಮಕ ಪದ್ಯ.
  ಅಪ್ಪ ನಾ ಚಿಕ್ಕವಳಿದ್ದಾಗ ದಿನಾಲೂ ಒಂದೊಂದು ಕಥೆಯನ್ನು ಹೇಳುತ್ತಿದ್ದರು. ಕೆಲ ಸಲ ಇನ್ನೊಂದು ಮತ್ತೊಂದು ಮಗದೊಂದು ಕಥೆ ಹೇಳು ಅಪ್ಪನ ಬಳಿ ಹಠ ಮಾಡುತ್ತಿದ್ದ ನಾನು ಪುಣ್ಯಕೋಟಿಯ ಕಥೆ ಕೇಳಿದ ತಕ್ಷಣ ನನ್ನ ಕಣ್ಣುಗಳಿಂದ ನನಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು, ಕಥೆಯ "ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ" ಸಾಲುಗಳನ್ನು ಕೇಳಿದಾಕ್ಷಣ ದುಃಖ ಉಮ್ಮಳಿಸಿ ಬಂದು ಅಲ್ಲೇ ಅಪ್ಪನ ಹೊಟ್ಟೆಯ ಮೇಲೆ ಅಳುತ್ತ ಬಿಕ್ಕುತ್ತ ನಿದ್ದೆಗೆ ಜಾರುತ್ತಿದ್ದೆ. ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕೇಳಿದಾಗಲೆಲ್ಲ ಅಪ್ಪನ ಹೊಟ್ಟೆಯ ಮೇಲೆ ಆನೆ ಆಡುತ್ತ ಕಥೆ ಕೇಳುತ್ತಿದ್ದ ದಿನಗಳು, ಅಮ್ಮ ನನ್ನನ್ನು ಸಮಾಧಾನಿಸುತ್ತಿದ್ದ ಬಾಲ್ಯದ ಸುಂದರ ಸವಿ ನೆನಪುಗಳು ನೆನಪಾಗಿ, ಕಣ್ಣೀರು ತರಿಸುವ ಈ ಪದ್ಯ ಎಷ್ಟೊಂದು ಸುಂದರವಾಗಿದೆ. ನನ್ನ ಪ್ರಕಾರ ಮಾನವೀಯ ಮೌಲ್ಯಗಳ ಕಲಿಕೆಗೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಈ ಪುಣ್ಯಕೋಟಿ ಗೋವಿನ ಹಾಡು.
  ಮತ್ತೊಮ್ಮೆ ಅಪ್ಪನಿಗಾಗಿ, ಅಮ್ಮನಿಗಾಗಿ, ನನಗಾಗಿ ಮತ್ತು ಈ ಬ್ಲಾಗ್ ಬರಹ ಓದುತ್ತಿರುವ ಎಲ್ಲರಿಗಾಗಿ ಪುಣ್ಯಕೋಟಿ ಗೋವಿನ ಹಾಡಿನ ಸಾಲುಗಳು :

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು

ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.

ಪುಣ್ಯಕೋಟಿಯ ಹಾಡು ವೀಕ್ಷಿಸಲು ಯೂಟ್ಯೂಬ್ ಲಿಂಕ್:
http://youtu.be/UOZNmoWirK4

Sunday, 7 December 2014

ಸರಿ-ತಪ್ಪು ಮತ್ತು ಒಪ್ಪು....

ಸರಿ-ತಪ್ಪು ಎನ್ನುವ ಅನುಭವದ ಮಹತ್ತರ ಪಾಠವನ್ನು ಜೀವನದ ತರಗತಿಯಲ್ಲಿ ಎಲ್ಲರೂ ಕಲಿಯಲೇಬೇಕು.
ಸರಿ ಎಂಬುದು ಸರಿ, ತಪ್ಪು ಎಂಬುದು ತಪ್ಪು; ಇದು ಕಾಲ ಸತ್ಯ.
ಈ ಸತ್ಯದ ಅರಿವಿದ್ದರೂ ಕೆಲ ಸಲ ಸರಿಯಾದುದನ್ನು ತಪ್ಪಾಗಿ ತಪ್ಪಾದುದುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಸಂದರ್ಭಗಳು ಒದಗಿ ಬರುತ್ತವೆ.
ಇಂತಹ ಸಮಯದಲ್ಲಿ ಸರಿ-ತಪ್ಪುಗಳು ಎರಡು ವಿಭಿನ್ನ ಆಯ್ಕೆಗಳಾಗಿರುತ್ತವೆ.
ನಮಗೆ ಸರಿ ಕಂಡದ್ದು ಬೇರೆಯವರಿಗೆ ತಪ್ಪಾಗಿ , ಬೇರೆಯವರಿಗೆ ಸರಿ ಕಂಡದ್ದು ನಮಗೆ ತಪ್ಪಾಗಿ ಕಾಣಬಹುದು.
ಹೊಂದಾಣಿಕೆ ಎಂಬುದು ಈ ಸರಿ ತಪ್ಪುಗಳ ಸರಿ ರೂಪ ತೊರುವ ಮಾರ್ಗಸೂಚಿ.
ಹೊಂದಾಣಿಕೆ ಸುಲಭದ ಮಾತೂ ಅಲ್ಲ. ಬೇರೆಯವರ ಅಭಿಪ್ರಾಯ-ಅಭಿರುಚಿಗಳನ್ನು ಗೌರವಿಸುವ ಗುಣವಿದ್ದಲ್ಲಿ ಮಾತ್ರ ಹೊಂದಾಣಿಕೆ ಸಾಧ್ಯ. ಯಾರು ಸರಿ ಯಾರು ತಪ್ಪು ಎಂಬುದಕ್ಕಿಂತ ಯಾವುದು ಸರಿ ಯಾವುದು ತಪ್ಪು ಎನ್ನುವುದು ಮುಖ್ಯ.ಇದನ್ನು ಮನಗಂಡು ಸರಿ-ತಪ್ಪುಗಳನ್ನು ಒಪ್ಪಿದಾಗ ಬಾಳು ಸದಾ ಸಮರಸದ ರಸದೌತಣವಾಗಿರುತ್ತದೆ.

Saturday, 6 December 2014

ಶಾಶ್ವತ ಸುಂದರ ಸತ್ಯ..

ಪ್ರೀತಿ ಇರುವವರೆಗೆ ಭಾವನೆ..
ಪ್ರೀತಿನೇ ಇಲ್ಲದಮೇಲೇ..??

ಭಾವನೆಗಳು ಇರುವವರೆಗೆ ಆಸೆ..
ಭಾವನೆಗಳೇ ಇಲ್ಲದಮೇಲೇ ..??

ಆಸೆಗಳು ಇರುವವರೆಗೆ ಕನಸು..
ಆಸೆಗಳೇ ಇಲ್ಲದಮೇಲೇ..??

ಕನಸುಗಳು ಇರುವವರೆಗೆ ಹಂಬಲ
ಕನಸುಗಳೇ ಇಲ್ಲದಮೇಲೇ.??

ಹಂಬಲ ಇರುವವರೆಗೆ ಜೀವಂತಿಕೆ
ಹಂಬಲವೇ ಇಲ್ಲದಮೇಲೇ..??

ಜೀವಾ ಇರೋವರೆಗೂ ಜೀವನ..
ಈ ಜೀವಾನೇ ಹೊರಟುಹೋದ್ರೆ..??

ಬದುಕು ಹೀಗೆ ಉತ್ತರಿಸಲಾಗದ ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಪಯಣ..!
ಈ ಪಯಣದಲ್ಲಿ ಯಾವುದು ಶಾಶ್ವತವಲ್ಲಾ..
ಅಳುವಾಗ ನಮ್ಮ ಕಣ್ಣ ಹನಿಯೂ ಕೂಡ ನಮ್ಮನೂ ಬಿಟ್ಟು ಹೊರಟು ಹೋಗುತ್ತೆ,
ಸಂಬಂಧಗಳ ಬಂಧನವೂ ನಮ್ಮನ್ನು ಬಂಧಿಸಿಡದು..
ಕತ್ತಲಾದ ಮೇಲೆ ನಮ್ಮ ನೆರಳೆ ನಮ್ಮನ್ನು ಬಿಟ್ಟು ಹೋಗುವುದಲ್ಲವೇ...??
ಕಷ್ಟಗಳು ಕೂಡ ಹಾಗೆಯೇ, ರಾತ್ರಿಯ ನಂತರ ಹಗಲು ಬರುವಂತೆ ಕಷ್ಟಗಳೂ ಕರಗಿ ಹೋಗುತ್ತವಾದ್ದರಿಂದ ಚಿಂತೆ ದುಃಖ ವ್ಯರ್ಥ..
ಶಾಶ್ವತವಲ್ಲದ ನಾಲ್ಕು ದಿನದ ಈ ಬದುಕಿನಲ್ಲಿ ಎಲ್ಲವೂ ಅಶಾಶ್ವತ..
ಕೊನೆಗಾಲದಲ್ಲಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವ ಈ ಜೀವ ತಾ ಗಳಿಸಿದ ಪ್ರೀತಿ ವಿಶ್ವಾಸ ಸ್ನೇಹ ಸಂಬಂಧಗಳ ಬಂಧ ಪ್ರೀತಿಪಾತ್ರರ ಹೃದಯದ ಕದ ತಟ್ಟಿದ ನೆನಪು ಮಾತ್ರ ಅಜರಾಮರವಾಗಿ ನೆನಪುಗಳ ಗರಿಯಾಗಿ ನವಿರಾಗಿ ಉಳಿಯುವುದು.
ಈ ಸತ್ಯ ಮನವರಿಕೆಯಾದಾಗ ಮಾತ್ರ ಜೀವನ ಸಾರ್ಥಕ ಸುಂದರವಾಗಿರುತ್ತೆ..! :)

Wednesday, 3 December 2014

ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)

  ಡಿಸೆಂಬರ್... ಹನ್ನೆರಡು ತಿಂಗಳುಗಳ ವರ್ಷದ ಕೊನೆಯ ತಿಂಗಳು. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತಿರುವ ಈ ತಿಂಗಳಿಗೆ ಸದಾ ಹೊಸತನದ ಆಗಮನದ ಸಂಭ್ರಮ. ಆದರೆ ಬಹುಶಃ ಚಳಿಗಾಲದಲ್ಲಿ ಬರುವುದರಿಂದ ಏನೋ ಗೊತ್ತಿಲ್ಲ ಒಂದು ರೀತಿ ಈ ತಿಂಗಳು ಪ್ರತಿ ಬಾರಿ ಸಂತೋಷದ ಜೊತೆ ಜೊತೆಗೆ ಬೇಸರದ ನಡುಕವನ್ನು ಮೂಡಿಸುತ್ತದೆ.
  ಮನಸ್ಸು ಹೊಸತನದ ನಿರೀಕ್ಷೆ, ಹೊಸ ವರ್ಷದಾಗಮನದ ತಯಾರಿ ನಡೆಸಿರುವಾಗ ನಮಗೆ ಗೊತ್ತಿಲ್ಲದಂತೆ ಮನಸ್ಸು ಮಂಕಾಗಿ ಕಳೆದ ಡಿಸೆಂಬರ್ ತಿಂಗಳಿಗೆ ಹಾರಿ ಬಿಡುತ್ತದೆ. ಕಳೆದ ವರ್ಷ ಮಾಡಿದ ಹೊಸ ನಿರ್ಧಾರಗಳು, ನಮಗೆ ನಾವೇ ಕೊಟ್ಟ ಭರವಸೆಗಳು, ಹೊಸ ವರ್ಷದಲ್ಲಿ ಮಾಡಬೇಕಾದ ಪ್ರವಾಸಗಳು, ಹೊಸ ವರ್ಷದಲ್ಲಿ ಓದಬೇಕೆಂದು ನಿರ್ಧರಿಸಿ ನಿಗದಿಪಡಿಸಿದ ಹೊತ್ತಿಗೆಗಳು, ಮಾಡಬೇಕಾದ ಹೊಸ ಕಾರ್ಯಗಳು, ಕೈ ಬಿಡಬೇಕಾದ ಕೆಲ ಅವಗುಣಗಳು, ರೂಢಿಗತ ಮಾಡಿಕೊಳ್ಳಬೇಕಾದ ಕೆಲ ಹೊಸ ಗುಣಗಳು, ಪಾಠಗಳು, ಪರೀಕ್ಷೆ-ನಿರೀಕ್ಷೆ.. ಹೀಗೆ ಕಳೆದ ವರ್ಷದ things to do this year ಅನ್ನೋ ಲಿಸ್ಟ್ ನ ಹತ್ತು ಹಲವು ನೆರವೇರದ  ಸಂಗತಿಗಳು ಮನದ ಕಿಟಕಿಯಿಂದ ಹೊರ ಇಣುಕಿ ಅಣುಕುತ್ತಿವೆ.
  ಈ ವರ್ಷ ಇದನ್ನು ಖಂಡಿತ ಮಾಡುವೆನು ಎನ್ನುತ್ತ ಪ್ರತಿ ವರ್ಷವೂ ಪ್ರತಿ ಸಲವೂ ನೆರವೇರದ ಸಂಗತಿಗಳ ನೆರವೆರಿಕೆಗೆ ನಮಗೆ ನಾವೇ ಕೊಡುವ ಮಾತಿನ ಭರವಸೆ ಹೇಳು ಹೆಸರಿಲ್ಲದೆ ಪಲಾಯನವಾದ ಪಾಲಿಸುವ, ಅಪೂರ್ಣವಾಗಿ ಉಳಿದ ವಿಷಯಗಳು, ಕೆಲವು ಸಲ ಇವೆಲ್ಲ funny ಅನ್ನೋ feel ಮೂಡಿಸಿದರೂ ಅದನ್ನೆಲ್ಲ ಸೀರಿಯಸ್ ಆಗಿ ಪರಿಗಣಿಸಲೇಬೇಕು.
  ಇವೆಲ್ಲದರ ನಡುವೆ ಈ ವರ್ಷ ಕೊನೆಗೊಳ್ಳುತ್ತಿದೆ ಅನ್ನೋದು ನಂಬಲಸಾಧ್ಯ. ಪರಿಪೂರ್ಣವಾಗಿ ಕಾರ್ಯಗತಗೊಳಿಸಿದ ಕೆಲ ಸಂಗತಿಗಳ ಹೆಮ್ಮೆ ಒಂದೆಡೆಯಾದರೆ ಮತ್ತೊಂದೆಡೆ ಮನಸ್ಸು ಮತ್ತೊಂದು ಹೊಸ ಆಶಯಗಳ, ಹಳೆಯ ಅಪೂರ್ಣ ಕಾರ್ಯಗಳ ಪೂರ್ಣಗೊಳಿಸುವ ಭರವಸೆಗಳ, ಮತ್ತಷ್ಟು ಹೊಸ  ನಿರ್ಧಾರ ಕನಸುಗಳ ಪಟ್ಟಿ ಸಿದ್ಧವಾಗುತ್ತಿದೆ. ಇವೆಲ್ಲವನ್ನೂ ನನಸುಗೊಳಿಸೋ ಆಸೆ ಆಶಾವಾದಿಗಳದ್ದಾದರೆ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆಯಾಯಿತು ಅನ್ನೊ ಗೋಳು ನಿರಾಶಾವಾದಿಗಳದ್ದು.
  ಏನೇ ಆಗಲಿ ಪ್ರತಿ ಕ್ಷಣ ಪ್ರತಿ ದಿನ ಪ್ರತಿ ವರ್ಷ ಎಲ್ಲ ಹೊಸ ಹೊಸತು..
ಹೊಸ ವರ್ಷದ ಬಾಗಿಲಲ್ಲಿ ಹೊಸ ಕನಸುಗಳೊಂದಿಗೆ ಹೊಸ ವರ್ಷದ ಬಾಗಿಲು ತೆರೆದು ಸಂಭ್ರಮಿಸಲು ಕುಟುಂಬ, ಸ್ನೇಹಿತರು, ಬಂಧುಗಳು, ನ್ಯೂ ಇಯರ್ ಪಾರ್ಟಿ, ಫಾರ್ಮ್ ಹೌಸ್ ಹೀಗೆ so many choices... :) :)
ಈ ವರ್ಷ ಕೊನೆಗೊಳ್ಳುತ್ತಿದೆ ಹೊಸ ವರ್ಷಕ್ಕೆ ಹೊಸ ಕನಸುಗಳನ್ನು ಹೆಣೆಯಲು ಸಜ್ಜಾಗೋಣ :) :)