Wednesday, 30 November 2016

ಸುಂದರ ಸಮರಸದ ಬಾಳ್ವೆಗೆ ರೂಮಿಯವರ 35 ನುಡಿಮುತ್ತುಗಳು..

"ಒಲವಿಗರು ಕೊನೆಗೆಲ್ಲೋ ಸೇರುವುದಿಲ್ಲ, ಮೊದಲಿಂದ ಒಬ್ಬರಲ್ಲೊಬ್ಬರಿರುತ್ತಾರೆ." ಎಂದು ಹೇಳಿದ ರೂಮಿಯವರ ಪೂರ್ಣ ಹೆಸರು ಜಲಾಲ್ ಅದ್-ದೀನ್ ಮಹಮ್ಮದ್ ಬಾಲ್ಖಿ (30 ಸೆಪ್ಟೆಂಬರ್ 1207 - 17 ಡಿಸೆಂಬರ್ 1273 ) ಜಲಾಲ್ ಅದ್-ದೀನ್ ಮಹಮ್ಮದ್ ರೂಮಿ ಅಥವಾ ‘ರೂಮಿ’ ಎಂದೇ ಹೆಚ್ಚು ಜನಪ್ರಿಯರಾಗಿರುವ ಇವರು ಕ್ರಿ.ಶ.13ನೇ ಶತಮಾನದ ಪರ್ಷಿಯದ ಕವಿ, ನ್ಯಾಯಾಧೀಶ, ತತ್ವಶಾಸ್ತ್ರಜ್ಞ, ಮತ್ತು ಸೂಫಿ ಮಿಸ್ಟಿಕ್. ಇರಾನಿಯನ್ನರು,ಟರ್ಕೀ ಜನರು, ಆಫ್ಘನ್ನರು, ತಾಜಿಕ್ ಜನರು, ಮತ್ತು ಇತರೆ ಮಧ್ಯ ಏಷ್ಯದ ಮುಸ್ಲಿಮರು ಅಷ್ಟೇ ಅಲ್ಲದೆ ಭಾರತೀಯ ಉಪಖಂಡದ ಮುಸ್ಲಿಮರು ಇವರ ಆಧ್ಯಾತ್ಮಿಕ ವಿಚಾರಧಾರೆಯನ್ನು ಕಳೆದ ಏಳು ಶತಮಾನಗಳ ಅವಧಿಯಲ್ಲಿ ಮೆಚ್ಚಿಕೊಂಡಿದ್ದಾರೆ. ರೂಮಿಯವರ ಮಹತ್ವವು ರಾಷ್ಟ್ರೀಯ ಮತ್ತು ಜನಾಂಗೀಯ ಗಡಿಗಳನ್ನು ಮೀರುವಂಥದು ಎಂದು ಪರಿಗಣಿಸಲಾಗಿದೆ. ಅವರ ಕವಿತೆಗಳನ್ನು ವಿಶ್ವದ ಅನೇಕ ಭಾಷೆಗಳಲ್ಲಿ ವಿವಿಧ ಶೈಲಿಗಳಲ್ಲಿ ಭಾಷಾಂತರಿಸಲಾಗಿದೆ. 2007 ರಲ್ಲಿ ಅವರನ್ನು "ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯ ಕವಿ." ಎಂದು ಬಣ್ಣಿಸಲಾಯಿತು.

ಅವರ 35 ಚಿಕ್ಕ ಕವಿತೆಗಳು ಇಲ್ಲಿವೆ, ಓದಿ, ಹಂಚಿಕೊಳ್ಳಿ!

1. ನನ್ನ ಮಾತು ಹಡಗಾದರೆ ಅದರ ಹುರುಳು ಇಡೀ ಕಡಲು. ಬಾ, ಬಗೆಯ ಅಂತರಾಳಕ್ಕೆ ಕರೆದೊಯ್ಯುತ್ತೇನೆ.

2. ನಿನ್ನೆ ಮುಗಿಯಿತು ಅದರ ಕತೆಯೊಡನೆ. ಇಂದು ಬಾಳಬೇಕು ಹೊಸ ಕತೆಯೊಳಗೆ.

3. ಹಿರಿಮೆಯ ನೇಸರ ನಾನು. ಒಡಲಲ್ಲಿ ಮುತ್ತುಗಳಿರುವ ಕಡಲು ನಾನು. ನನ್ನೆದೆಯಲ್ಲಿ ನಾಕದ ಪೆಂಪಿದೆ.

4. ದೀಪವಾಗು, ದೋಣಿಯಾಗು, ಇಲ್ಲದಿದ್ದರೇಣಿಯಾಗು. ಯಾರದಾದರೂ ಬಗೆಯನ್ನು ಮಾಯಿಸು. ಕುರುಬನಂತೆ ಮನೆ ಬಿಟ್ಟು ಹೊರಡು.

5. ಮಾತಿಗೆಟಕದ ಸೋಜಿಗಗಳನು ಎದೆಯಿಂದ ಕೇಳು.

6. ಸುಮ್ಮನಿದ್ದಾಗ ನನ್ನೊಳಗೆ ಗುಡುಗು ಅವಿತಿರುತ್ತದೆ.

7. ನೀ ನನಗೆ ಕೊಡುವುದನ್ನು ಬಗೆಗಣ್ಣಿಗೆ ಎಂದೂ ಬಗೆಯಲಾಗಿಲ್ಲ.

8. ನೀ ಪಡುತ್ತಿರುವ ಈ ನೋವುಗಳು ಓಲೆಗಳು. ಕೇಳಿಸಿಕೊ.

9. ನಿನ್ನೆ ನಾನು ತಿಳುವಳಿಕಸ್ತನಾಗಿ ಜಗವನ್ನೆ ಮಾರ‍್ಪಡಿಸಬೇಕೆಂದಿದ್ದೆ. ಇಂದು ಅರಿಗನಾಗಿ ನಾನೇ ಮಾರ‍್ಪಡುತ್ತಿದ್ದೇನೆ.

10. ಬಯಸುವುದು, ಮಾಡುವುದು, ಬೇಡುವುದು, ನಿನ್ನಿಂದ ದೂರ ಮಾಡುವುದೆಲ್ಲವನು ದೂರ ಮಾಡು ನನ್ನೊಲವೇ.

11. ಕಾಣದಷ್ಟೆತ್ತರದ ಜಾಗದ ಮೇಲೆ ನೀ ಕಣ್ಣಿಡು.

12. ತಿಳುವಳಿಕೆ ನಾವು ತಕ್ಕವರಲ್ಲವೆನ್ನುತ್ತಿದೆ; ಒಲವು ತಕ್ಕವರೆನ್ನುತ್ತಿದೆ; ನನ್ನ ಬದುಕು ಇವೆರಡರ ನಡುವೆ ಹರಿಯುತ್ತಿದೆ.

13. ಬೆಳಗಿನಲಿ ನಿನ್ನ ಹೊಗಳಿದೆ... ತಿಳಿಯದೆ ಇರುಳಿನಲಿ ನಿನ್ನೊಡನಿದ್ದೆ... ತಿಳಿಯದೆ ನಾನು ನಾನೆಂದುಕೊಂಡಿದ್ದೆ... ಆದರೆ ನೀನಾಗಿದ್ದೆ... ತಿಳಿಯದೆ.

14. ನನ್ನ ಬದುಕಿನ ತಿರುಳಿಷ್ಟೆ: ಸರಕಾಗಿದ್ದೆ; ಅಡುಗೆ ಮಾಡಲ್ಪಟ್ಟು ಪಳಗಿದೆ; ಒಲವಿನಲ್ಲಿ ಸುಟ್ಟೆ.

15. ನಿನ್ನ ಆತ್ಮ ನನಗೆಷ್ಟು ಹತ್ತಿರವೆಂದರೆ ನೀ ಯೋಚಿಸಿದ್ದೆಲ್ಲ ನನ್ನ ಮನಸ್ಸಿನಿಂದ ಹಾದುಹೋಗುತ್ತದೆ.

16. ಹಾಯ್ತನದಿಂದ ಓಡು, ಜೋಕೆಯಾಗಿರುವುದನ್ನು ಮರೆ, ಬದುಕಲು ಹೆದರಿಕೆಯೆಲ್ಲಾಗುವುದೋ ಅಲ್ಲಿ ಬದುಕು, ಗಳಿಸಿರುವ ಹೆಸರನ್ನು ಸುಟ್ಟಿಹಾಕಿ ಕೆಟ್ಟ ಹೆಸರನ್ನು ಗಳಿಸು. ಮುನ್ನೆಚ್ಚರದಿಂದ ಎಲ್ಲವನ್ನೂ ಯೋಚಿಸಿದ್ದು ಮಾಡಿದ್ದು ಸಾಕು, ಇನ್ನು ಹುಚ್ಚನಾಗು.

17. ನಿನ್ನ ಅಂತರಾತ್ಮವನ್ನು ಮದುವೆಯಾಗು. ಅದೇ ದಾರಿ.

18. ಇರಬೇಕೋ ಇರಬೇಡವೋ ಎಂಬ ಗೊಂದಲವೆನಗಿಲ್ಲ. ಎರಡು ಲೋಕಗಳಿಂದಲೂ ತಪ್ಪಿಸಿಕೊಳ್ಳುವುದು ಕೆಚ್ಚೆದೆಯ ಗುರುತಲ್ಲ. ಎನ್ನೊಳಗಡಗಿರುವ ಬೆರಗುಗಳನು ತಿಳಿಯದೆ ಹೋಗುವುದು ಹುಚ್ಚಲ್ಲವಾದರೆ ಮತ್ತಾವುದು?

19. ಬಯಕೆಯ ಗದ್ದಲದಲಿ ನಿನ್ನೊಲವು ಎದೆಯಲಡಗಿರುವುದ ತಿಳಿಯೆ. ನಿಲ್ಲಿಸು ಆ ಗದ್ದಲವನು! ಮೌನದಲಿ ಅವನ ಮಾತು ಕೇಳದಿರದು.

20. ನಾ ತೆರೆದುಕೊಳ್ಳಲು ನೀ ತೆರೆದುಕೊ. ನನ್ನ ಪ್ರೇರಣೆಯನ್ನು ಕಂಡುಕೊಳ್ಳಲು ನಿನ್ನದನ್ನು ತಾ.

21. ನಿನ್ನ ಬೆಳಕಲಿ ಒಲವನು ಕಲಿತೆ, ನಿನ್ನಂದದಲಿ ಹಾಡುವುದ ಕಲಿತೆ. ಎನ್ನೆದೆಯೊಳಗೆ ನೀ ಕುಣಿಯುವೆ - ಯಾರಿಗೂ ಕಾಣದಂತೆ.

22. ನನಗೆ ಹೆಚ್ಚಿಗೆಯೇನು ಗೊತ್ತಿಲ್ಲ. ಒಲವನ್ನು ಕುಡಿದು ಮತ್ತೇರಿದೆಯಷ್ಟೆ.

23. ಹತ್ತಿರವಾದಷ್ಟೂ ನಾನೆಷ್ಟು ದೂರವೆಂಬ ಅರಿವು.

24. ಸರಿ-ತಪ್ಪುಗಳಾಚೆಗೊಂದು ಬಯಲಿದೆ. ನಾ ನಿನಗಲ್ಲಿ ಸಿಗುತ್ತೇನೆ.

25. ಒಳ್ಳೆಯ ಗೆಳೆಯನಿರೆ ಕನ್ನಡಿಯೇಕೆ?

26. ಹುಣ್ಣೆಂಬುದು ಬೆಳಕು ಒಳಹೊಕ್ಕುವ ಕಿಂಡಿಯಯ್ಯ.

27. ಬೀಳುಗೆಯಾಯಿತು. ಈಗೆನ್ನ ಏಳಿಗೆಯ ನೋಡಿ.

28. ಬಾನನ್ನು ಕರುಳಿನಿಂದ ಮಾತ್ರ ಮುಟ್ಟಬಲ್ಲೆ.

29. ನಿನ್ನ ನಿಜವಾದ ಒಲವಿನ ಹೆಚ್ಚಿನ ಸೆಳೆತಕ್ಕೆ ಸದ್ದಿಲ್ಲದೆ ಒಳಗಾಗು.

30. ಇದ್ದಂತೆ ಕಾಣು ಇಲ್ಲವೇ ಕಂಡಂತಿರು.

31. ಒಲವಿಗರು ಕೊನೆಗೆಲ್ಲೋ ಸೇರುವುದಿಲ್ಲ, ಮೊದಲಿಂದ ಒಬ್ಬರಲ್ಲೊಬ್ಬರಿರುತ್ತಾರೆ.

32. ನೀರಿನ ಅಲೆಗಳು ನಿಲ್ಲಲಿ, ನಿನ್ನೊಡಲಿನ ಚಂದ್ರ ನಕ್ಷತ್ರಗಳನ್ನು ಕಾಣುವೆಯಂತೆ.

33. ಹುಟ್ಟಿನಿಂದ ರೆಕ್ಕೆಯಿದ್ದು ತೆವಳುವ ಬಾಳೇಕೆ?

34. ನಿನ್ನ ತಿಳುವಳಿಕೆಯನ್ನು ಮಾರಿ ಸೋಜಿಗವನ್ನು ಕೊಂಡುಕೊ.

35. ಉಜ್ಜಿದಾಗೆಲ್ಲ ಸಿಟ್ಟಾದರೆ ನಿನ್ನ ಹೊಳೆಸುವುದು ಹೇಗೆ?

ಮಾಹಿತಿ: ವಿಕಿಪೀಡಿಯ.
ಚಿತ್ರಗಳು, ಕವಿತೆಗಳು: rumikannada.